ಕುಶಾಲನಗರ ಫೆ.17 NEWS DESK : ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಫೆ.18 ರಂದು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಉಚಿತ ಹಾಸ್ಯ ನಗೆ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗಸಂಸ್ಥೆ ಕಲಾವಿದರ ಮೂಲಕ ಸಂಜೆ 6 ಗಂಟೆಗೆ ಹಾಸ್ಯ ನಗೆ ನಾಟಕ ಆರಂಭಗೊಳ್ಳಲಿದೆ. ಶ್ರೀ ಕೃಷ್ಣ ಸಂಧಾನ ಎಂಬ ಈ ಹಾಸ್ಯ ನಗೆ ನಾಟಕ 2 ಗಂಟೆ 30 ನಿಮಿಷಗಳ ಅವಧಿ ನಡೆಯಲಿದೆ. ನಾಟಕದ ಉದ್ಘಾಟನೆಯನ್ನು ಉದ್ಯಮಿಗಳು ಹಾಗೂ ಸಮಾಜಸೇವಕರಾದ ರಾಜೇಗೌಡ ಅವರು ನೆರವೇರಿಸಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಾಯತ್ರಿ ಕಲ್ಯಾಣ ಮಂಟಪದ ಮಾಲೀಕರಾದ ಕೆ.ಬಿ.ಗಾಯತ್ರಿ ಉಪಸ್ಥಿತರಿರುವರು. ಈ ನಾಟಕ ನೋಡಿ ನಗದೇ ಇರುವ ಪ್ರೇಕ್ಷಕರಿಗೆ ಸ್ಥಳದಲ್ಲೇ ನಗದು ಬಹುಮಾನ ನೀಡುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಮಹದೇವಪ್ಪ ತಿಳಿಸಿದರು. ರಂಗಭೂಮಿಯ ಕಲೆ ಪ್ರತಿಭೆಗಳನ್ನು ಗುರುತಿಸಲು ಸಂಘ ಈ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಂಡಿದೆ. ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.
ಸಂಘದ ಮಾಜಿ ಅಧ್ಯಕ್ಷರಾದ ವಿಶ್ವಕುಮಾರ್ ಗುಡ್ಡೆಮನೆ ಅವರು ಮಾತನಾಡಿ ಬಳ್ಳಾರಿಯಿಂದ ಸುಮಾರು 20ಕ್ಕೂ ಅಧಿಕ ನಿನಾಸಂ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಡೇವಿಡ್ ಸೋಲೋಮನ್, ಕಾವೇರಿ ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಇದ್ದರು.











