



ಕುಶಾಲನಗರ ಫೆ.20 NEWS DESK : ರಾಜ್ಯ ಸರ್ಕಾರ ನೂತನ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸುವ ಚಿಂತನೆ ವಿರೋಧಿಸಿ ಕುಶಾಲನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸೇರಿದ ನೂರಾರು ವಿದ್ಯಾರ್ಥಿಗಳು ಸರ್ಕಾರದ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು. ಜಿಲ್ಲೆಯಲ್ಲಿ ಹಿಂದುಳಿದ ಮತ್ತು ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಸಂಬಂಧ ಕೊಡಗು ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು, ಇದೀಗ ಅದನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪ್ರಮುಖರಾದ ಚಂದ್ರಶೇಖರ್ ಮಾತನಾಡಿ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಪ್ರತಿವರ್ಷ 50,000 ಕೋಟಿ ರೂಗಳನ್ನು ವೆಚ್ಚ ಮಾಡುತ್ತಿದೆ ಅದರಲ್ಲಿ ಶೇಕಡ ಒಂದರಷ್ಟು ಪ್ರಮಾಣದ ಹಣವನ್ನು ರಾಜ್ಯದ ಶಿಕ್ಷಣ ರಂಗಕ್ಕೆ ನೀಡಿದರೆ ಎಲ್ಲಾ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಸುಧಾರಿಸುತ್ತದೆ ಎಂದರು. ಹಿಂದಿನ ಸರ್ಕಾರ ಜಿಲ್ಲೆಗೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿದರೆ ಈಗ ಪ್ರಸಕ್ತ ಸರ್ಕಾರ ಅದನ್ನು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಸರ್ಕಾರ ವಿಶ್ವವಿದ್ಯಾಲಯಗಳನ್ನು ಬಲಿಷ್ಠ ಗೊಳಿಸುವ ಕಾಳಜಿ ಹಾಗೂ ಇಚ್ಛಾಶಕ್ತಿಯನ್ನು ಹೊಂದಬೇಕು ಸರಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚುವುದರಿಂದ ಸರಕಾರ ಖಾಸಗಿ ವಿಶ್ವವಿದ್ಯಾಲಯಗಳತ್ತ ಹೆಚ್ಚಿನ ಕಾಳಜಿ ಹೊಂದಿದ ರೀತಿ ಕಾಣುತ್ತದೆ ಎಂದು ಆರೋಪಿಸಿದರು. ಸರ್ಕಾರ ತಕ್ಷಣ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ನಿರ್ಧಾರವನ್ನು ತಕ್ಷಣ ಹಿಂಪಡೆದು ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ಕುಶಾಲನಗರ ಪಟ್ಟಣ ವ್ಯಾಪ್ತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಅನುಗ್ರಹ ಕಾಲೇಜು, ಮತ್ತು ಕನ್ನಡ ಭಾರತಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖರಾದ ನವನೀತ್ ಪೊನ್ನಟಿ, ರೋಹಿತ್ ಪ್ರಮೋದ್ ಮತ್ತಿತರರು ಇದ್ದರು.