



ಕುಶಾಲನಗರ, ಫೆ.20 NEWS DESK : ಖುದ್ದು ಮುಖ್ಯಮಂತ್ರಿಗಳು ಭೇಟಿ ನೀಡಿದರೂ ಇದುವರೆಗೆ ತಮಗೆ ಇನ್ನೂ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಮಳೆಗಾಲದಲ್ಲಿ ಮನೆ ಹಾನಿಗೊಳಗಾದ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಸಂತ್ರಸ್ತರಾದ ಬಿ.ಎಸ್.ಬಸವರಾಜು ಕುಟುಂಬ ಸದಸ್ಯರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅತಿಯಾದ ಮಳೆಯಿಂದ ಕಳೆದ ಜೂನ್ ತಿಂಗಳಲ್ಲಿ ನಮ್ಮ ಮನೆ ಸಂಪೂರ್ಣ ಕುಸಿದು ಹೋಗಿತ್ತು. ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು, ಅಧಿಕಾರಿಗಳು ಬಂದು ಮನೆ ಪರಿಶೀಲನೆ ಮಾಡಿ ಸಾಂತ್ವನ ಹೇಳಿದರು. ನೀವು ಚಿಂತಿಸಬೇಡಿ ನಿಮಗೆ ವಾಸಿಸಲು ಯೋಗ್ಯವಾದ ಹೊಸ ಮನೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಆರೇಳು ತಿಂಗಳು ಕಳೆದರೂ ಮನೆ ನಿರ್ಮಾಣಗೊಂಡಿಲ್ಲ. ಇದುವರೆಗೆ ಕೇವಲ ರೂ.1.20 ಲಕ್ಷ ಅನುದಾನ ನೀಡಲಾಗಿದೆ. ಈ ಹಣದೊಂದಿಗೆ ಸಾಲ ಮಾಡಿ ರೂ.1.60 ಲಕ್ಷ ವೆಚ್ಚದಲ್ಲಿ ಫೌಂಡೇಷನ್ ನಿರ್ಮಾಣ ಮಾಡಿದ್ದೇವೆ. ಆದರೂ ಮನೆ ನಿರ್ಮಾಣಕ್ಕೆ ಅನಾನುಕೂಲವಾಗಿದೆ.
ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೆ ಅವರು ಭರವಸೆ ಹಾಗೆ ಉಳಿದಿದೆಯೇ ಹೊರತು ನಮ್ಮ ಬಡ ಕುಟುಂಬಕ್ಕೆ ವಸತಿ ಭಾಗ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕುಟುಂಬ ಸದಸ್ಯರಿಗೆ ವಾಸಿಸಲು ಮನೆಯಿಲ್ಲ. ಬಾಡಿಗೆ ಮನೆಯಲ್ಲಿ ಸಧ್ಯಕ್ಕೆ ವಾಸ ಮಾಡುತ್ತಿದ್ದೇವೆ. ನಾವು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ಪ್ರತಿ ತಿಂಗಳು ರೂ.5 ಸಾವಿರ ಬಾಡಿಗೆ ಹಣ ಕಟ್ಟಬೇಕು. ಜೊತೆಗೆ ಸಾಲ ಮಾಡಿ ಮನೆಗೆ ಅಡಿಪಾಯ ಮಾಡಿದ್ದೇವೆ. ಸಾಲಗಾರರ ಜೊತೆಗೆ ಬಾಡಿಗೆ ಮನೆ ಹಣ ಕಟ್ಟಬೇಕು. ಸರ್ಕಾರದ ವತಿಯಿಂದ ಬಂದಿದ್ದ ರೂ.1.20 ಲಕ್ಷ ಹಣ ಬಹುತೇಕ ಬಾಡಿಗೆ ನೀಡಲು ಮತ್ತಿತರ ವೆಚ್ಚ ನಡೆದಿದೆ ಎಂದು ಸಂತ್ರಸ್ತೆ ಸುಶೀಲ ನೊಂದು ನುಡಿದರು. ಪಂಚಾಯಿತಿ ಅಧಿಕಾರಿಗಳು ಫೌಂಡೇಷನ್ ಜಿಪಿಎಸ್ ಮಾಡಿದ್ದು, ನೀವು ಗೋಡೆ ಕಟ್ಟಿ ಹಣ ಬರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಕೂಲಿ ಮಾಡಿಜೀವನ ಸಾಗಿಸುತ್ತಿದ್ದು, ಸ್ವಂತವಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಮಸ್ಯೆ ಉಂಟಾಗಿದೆ. ಆದ್ದರಿಂದ ಸರ್ಕಾರ ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು.ಆದಷ್ಟು ಬೇಗ ಮನೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕುಟುಂಬ ಸದಸ್ಯರಾದ ರಾಜೇಶ್ ಹಾಗೂ ರಾಧಾ ಮನವಿ ಮಾಡಿದ್ದಾರೆ.