
ವಿರಾಜಪೇಟೆ NEWS DESK ಫೆ.23 : ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೈಸೂರಿನ ಸಿ ಎಫ್ ಟಿ ಆರ್ ಐ ನ ವೈದ್ಯರಾದ ಡಾ.ಕಲಾ ಅವರು ಮಕ್ಕಳಿಗೆ ವಿಜ್ಞಾನದ ಮಹತ್ವವನ್ನು ತಿಳಿಸಿದರು. ಶುಚಿತ್ವವನ್ನು ಕಾಪಾಡಬೇಕು, ಸ್ವಚ್ಛತೆಯಿಂದ ಉತ್ತಮ ಪರಿಸರವನ್ನು ನಿರ್ಮಿಸಲು ಸಾಧ್ಯ ಎಂದರು. ಆಹಾರ ಪದ್ದತಿಯ ಬಗ್ಗೆ ಮಾತನಾಡಿ ಸಮತೋಲಿತ ಆಹಾರವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ಜಂಕ್ ಫುಡ್ ಗಳಿಂದ ಆದಷ್ಟು ದೂರ ಇರೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ವಿಜ್ಞಾನವು ಇಂದು ಸಮಾಜದ ಹಾಗೂ ರಾಷ್ಟ್ರದ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ವಿಜ್ಞಾನ ಬೆಳೆದಂತೆ ನವ ಪರಿಕಲ್ಪನೆ ಉದ್ಭವಿಸಲು ಸಾಧ್ಯ. ಕೇವಲ ಅಧ್ಯಯನ ವಿಷಯ ಮಾತ್ರವಾಗಿರದೆ ವಿಜ್ಞಾನವು ಬದುಕಿನ ಪಾಠವನ್ನು ನಮಗೆ ಕಲಿಸಿಕೊಡುತ್ತದೆ. ಅದೊಂದು ಜೀವನಶೈಲಿ ಆಗಿದೆ ಎಂದು ಹೇಳಿದರು. ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲಾ ವಿದ್ಯಾರ್ಥಿಗಳು, ಮೊಂಟೆಸರಿ ವಿದ್ಯಾರ್ಥಿಗಳು, ಹೆಗ್ಗಳ ಸರ್ಕಾರಿ ಶಾಲೆಯ ಪ್ರಾಥಮಿಕ, ಪ್ರೌಢ ಶಾಲೆಯ ವಿದ್ಯಾರ್ಥಿಗಳು, ನಿರ್ಮಲ ರಮಣ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಡಾ.ಕಲಾ ರವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು.









