ಮಡಿಕೆಕೇರಿ ಫೆ.24 NEWS DESK : ರಕ್ತದಾನವು ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ಮತ್ತೊಂದು ಜೀವವನ್ನು ಉಳಿಸುವ ಪುಣ್ಯ ಕೆಲಸ ಮಾಡಿದಂತೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು. ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಎನ್.ಎಸ್.ಎಸ್.ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಮೈಸೂರಿನ ಸಂತ ಜೋಸೆಫರ ರಕ್ತನಿಧಿ ಘಟಕದ ಸಹಯೋಗದಲ್ಲಿ ವಿರಾಜಪೇಟೆ ನಗರದ ಸಂತ ಅನ್ನಮ್ಮ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುಗದಲ್ಲಿ ರಕ್ತದಾನವು ಶ್ರೇಷ್ಠದಾನವಾಗಿದ್ದು, ಹಲವು ಜನರ ಜೀವ ರಕ್ಷಣೆ ಮಾಡುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಾನ ಮಾಡುವುದರೊಂದಿಗೆ ದಾನಿಗಳ ಆರೋಗ್ಯ ವೃದ್ಧಿಸುವುದರೊಂದಿಗೆ ಒಂದು ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಸಂತೃಪ್ತಿ ರಕ್ತದಾನಿಗಳಿಗೆ ಒದಗಲಿದೆ ಎಂದು ಹೇಳಿದರು. ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳು ಉತ್ತಮ ಪರಿಸರ ನಿರ್ಮಾಣದೊಂದಿಗೆ ಶುಚಿತ್ವ ಹಾಗೂ ಆರೋಗ್ಯಕ್ಕೂ ಮಹತ್ವವನ್ನು ಕೊಡಬೇಕು ಎಂದ ಅವರು ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ರಕ್ತದಾನವನ್ನು ಮಾಡುವುದರಿಂದ ಸಮಾಜಕ್ಕೆ, ಮತ್ತೊಬ್ಬರಿಗೆ ಉಪಕಾರ ಮಾಡಿದಂತಾಗುತ್ತದೆ. ಇಂದು ರಕ್ತದಾನವು ಪ್ರಾಮುಖ್ಯವನ್ನು ಪಡೆದಿದ್ದು, ಶ್ರೇಷ್ಠ ಕಾರ್ಯವಾಗಿದೆ ಎಂದರು. ಸಾಮಾಜಿಕ ಕಳಕಳಿಗೆ ವಿದ್ಯಾರ್ಥಿಗಳು ತೋರಿಸುತ್ತಿರುವ ಕಾಳಜಿ ಶ್ಲಾಘನೀಯ ಎಂದು ಹೇಳಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರು ಹಾಗೂ ಪ್ರಧಾನ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ರಕ್ತದಾನದ ಮಹತ್ವದ ಬಗ್ಗೆ ಮತ್ತು ಆರೋಗ್ಯ ಜಾಗೃತಿಯ ಬಗ್ಗೆ ಮಾತನಾಡಿದರು. ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ರಕ್ತನಿಧಿ ಘಟಕದ ವೈದ್ಯರಾದ ಡಾ.ಇಬ್ರಾಹಿಂ ರಕ್ತದಾನದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ರಕ್ತದಾನದ ಪ್ರಸ್ತುತತೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಮಾತನಾಡಿ, ರಕ್ತದಾನವು ಪರರಿಗೆ ತಾನು ಮಾಡುವ ಉಪಕಾರವಾಗಿದ್ದು, ಶ್ರೇಷ್ಠ ದಾನವಾಗಿದೆ. ಮತ್ತೊಬ್ಬರಿಗೆ ನಾವು ಸಹಾಯ ಮಾಡಿದಾಗ ತನ್ನ ಆರೋಗ್ಯ ಹಿತಕರವಾಗುತ್ತದೆ. ತಾನು ಬದುಕಿ ಇತರರನ್ನು ಬದುಕಿಸಬೇಕು ಎಂಬುದು ರಕ್ತದಾನದ ಉದ್ದೇಶವಾಗಿದ್ದು ಯುವಕ ಯುವತಿಯರು ರಕ್ತದಾನ ಮಾಡುವುದರ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ವಿರಾಜಪೇಟೆ ಪುರಸಭಾ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಅತಿಫ್ ಮನ್ನಾ, ಸಂತ ಅನ್ನಮ್ನ ಪಾಲಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಜೋಕಿಂ ರಾಡ್ರಿಗೀಸ್, ಮುಖಂಡರಾದ ಮಹದೇವ, ಮೇಲ್ರಯ್ ಲೋಬೋ, ನಾಪಂಡ ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿ ಬಿ. ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ವಂದಿಸಿ, ವಿದ್ಯಾರ್ಥಿನಿ ಸೃಜನ ದೇಚಮ್ಮ ನಿರೂಪಿಸಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ, ಕಾರ್ಯಕ್ರಮ ಆಯೋಜಕರು, ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರಕ್ತದಾನ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ :: ಮುಂಜಾನೆಯಿಂದಲೇ ಕಾಲೇಜಿನ ಪದವಿ, ಸ್ನಾತಕೋತ್ತರ ಪದವಿ, ಉಪನ್ಯಾಸಕರು ಅತೀ ಉತ್ಸಾಹದಿಂದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು. ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ವೈದ್ಯರು ಹಾಗೂ ಸುಶ್ರುಶಕ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಆರೋಗ್ಯ ತಪಾಸಣೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ರಕ್ತದಾನದ ಮಹತ್ವ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಉದ್ದೇಶಗಳನ್ನು ಅರಿತರು.











