
ನಾಪೋಕ್ಲು ಫೆ.25 NEWS DESK : ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸಲಾಗುತ್ತಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಬಲ್ಲಮಾವಟ್ಟಿ ವಲಯ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಅಭಿನಂದನಾ ಸಭೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಕಾರ್ಯಗಳು ಸ್ಥಗಿತಗೊಂಡಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು. ಬಲ್ಲಮಾವಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡು ಕೋಟಿ 20 ಲಕ್ಷ ರೂ.ಗಳ ಕೆಲಸ ಆಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 35 ಕೋಟಿ ರೂ.ಗಳ ಅನುದಾನ ನೀಡಲಾಗಿದೆ ವಿಶೇಷ ಅನುದಾನ 20 ಕೋಟಿ ರೂ.,ವಿರಾಜಪೇಟೆ ಕ್ಷೇತ್ರದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆ ಹಾನಿ ಅನುದಾನ 10 ಕೋಟಿ ರೂ. ಒದಗಿಸಲಾಗಿದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ 25 ಕೋಟಿ ರೂ. ನೀಡಲಾಗಿದ್ದು, ಅದರಲ್ಲಿ 17 ಕೋಟಿ ರೂ.ಹಣವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಅಂಕಿ ಅಂಶಗಳೊಂದಿಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರಾ ಧರ್ಮಜ ಉತ್ತಪ್ಪ ಮಾತನಾಡಿ, ಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು. ಈ ಸಂದರ್ಭ ಗ್ರಾ.ಪಂ ವತಿಯಿಂದ ಶಾಸಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಲ್ಲಮಾವಟ್ಟಿ ವಲಯ ಕಾಂಗ್ರೆಸ್ ಅಧ್ಯಕ್ಷ ತಾಪಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ನೆಲಜಿ ಕಾಂಗ್ರೆಸ್ ಬೂತ್ ಅಧ್ಯಕ್ಷ ಕೈಬುಳಿರ ಸಾಬು ಗಣಪತಿ, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ನಿರ್ದೇಶಕ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ಬಲ್ಲಮಾವಟಿ ಬೂತ್ ಅಧ್ಯಕ್ಷ ಚೆಂಗೇಟಿರ ಕುಶಾಲಪ್ಪ, ಪೇರೂರು ಬೂತ್ ಅಧ್ಯಕ್ಷ ಪಾಲೆಯಂಡ ಅಯ್ಯಪ್ಪ, ಹಿರಿಯ ಕಾಂಗ್ರೆಸಿಗರಾದ ಮೂವೆರ ಹ್ಯಾರಿ ಸುಬ್ರಮಣಿ, ಮಣವಟ್ಟಿರ ಪಾಪು ಚಂಗಪ್ಪ, ಕಾಂಗ್ರೆಸ್ ಪದಾಧಿಕಾರಿಗಳು, ಪಂಚಾಯತಿ ಸದಸ್ಯರು, ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯ ಮಚ್ಚುರ ರವೀಂದ್ರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು. ಮಣವಟ್ಟಿರ ದಯಾ ಕುಟ್ಟಪ್ಪ ಪ್ರಾರ್ಥಿಸಿ, ನಿರೂಪಿಸಿ ವಂದಿಸಿದರು. ಬಲ್ಲಮಾವಟಿ, ಪೇರೂರು, ದೊಡ್ಡ ಪುಲಿಕೋಟು, ನೆಲಜಿ ಗ್ರಾಮದ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಬೊಳ್ಯಬ್ಬೆ ರಸ್ತೆ ಕಾಮಗಾರಿ, ಬಲ್ಲಮಾವಟಿಗೆ ವಿದ್ಯುತ್ ಪರಿವರ್ತಕ, ಪಂದೇಟು ವಿಗೆ ವಿದ್ಯುತ್ ಪರಿವರ್ತಕ, ನುಚ್ಚು ಮಣಿಯಂಡ ಐನ್ ಮನೆಗೆ ತೆರಳುವ ರಸ್ತೆ, ಬಲ್ಲಮಾವಟಿ ಭಗವತಿ ದೇವಸ್ಥಾನ ರಸ್ತೆ, ಪೆಬ್ಬಟ್ಟಿರ ಕುಟುಂಬಸ್ಥರ ಐನ್ ಮನೆಗೆ ತೆರಳುವ ಮಾರ್ಗದ ತಡೆ ಗೋಡೆ, ಪೊನ್ನುಕಂಡ ಕುಟುಂಬಸ್ಥರ ರಸ್ತೆ, ಪೇರೂರು ಇಗ್ಗುತ್ತಪ್ಪ ದೇವಸ್ಥಾನ ರಸ್ತೆ, ನೆಲಜಿ ಕಕ್ಕಬ್ಬೆ ಮುಖ್ಯ ರಸ್ತೆ ಡಾಂಬರೀಕರಣ, ನಾಪನೆರವಂಡ ಐನ್ ಮನೆ ರಸ್ತೆ, ಚೀಯಕಪೂವಂಡ ಐನ್ ಮನೆಗೆ ತೆರಳುವ ರಸ್ತೆ ಕಾಮಗಾರಿ ವೀಕ್ಷಣೆ ಹಾಗೂ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









