
ಮಡಿಕೇರಿ NEWS DESK ಫೆ.26 : ಅನ್ನಭಾಗ್ಯದ ಅಕ್ಕಿಗೆ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೆ ಕೆಲವರು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಮಾಹಿತಿ ಲಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಚ್ಚರಿಕೆ ನೀಡಿದೆ. ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿಷಯ ಪ್ರಸ್ತಾಪಿಸಿದ ಸಮಿತಿಯ ಅಧ್ಯಕ್ಷ ಜಾನ್ಸನ್ ಮಾರ್ಚ್ ತಿಂಗಳಲ್ಲಿ ಅನ್ನಭಾಗ್ಯದ ಅಕ್ಕಿ ಅರ್ಹ ಫಲಾನುಭವಿಗಳಿಗೆ ವಿತರಣೆಯಾಗಲಿದೆ ಎಂದರು. ಈ ಹಿಂದೆ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿತ್ತು, ಮಾರ್ಚ್ ತಿಂಗಳಿನಿಂದ ಅನ್ನಭಾಗ್ಯ ಅಕ್ಕಿಯನ್ನು ವಿತರಿಸಲಾಗುವುದು. ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಶೀಘ್ರ ಬಗೆಹರಿಸಲಾಗುವುದು ಎಂದು ತಿಳಿಸಿದರು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯದ ಅಕ್ಕಿಗೆ ಹೆಚ್ಚುವರಿ ಹಣವನ್ನು ಪಡೆಯುತ್ತಿರುವ ಪ್ರಕರಣಗಳು ಕಂಡುಬಂದಿದೆ. ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಮತ್ತು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ ಮಾತನಾಡಿ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಲು ಹಲವು ರೀತಿಯಲ್ಲಿ ಸಹಾಯಕವಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾ.ಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.









