ನಾಪೋಕ್ಲು, NEWS DESK ಅ.22: ಸಾಂಪ್ರದಾಯಿಕ ಹಬ್ಬಗಳು ಮತ್ತು ಹರಿದಿನಗಳ ಆಚರಣೆಯಿಂದ ಸಂಸ್ಕೃತಿ, ಪದ್ಧತಿ ಹಾಗೂ ಪರಂಪರೆಗಳನ್ನು ಉಳಿಸಿ ಬೆಳೆಸುವುದರ ಜತೆಗೆ ಸಾಮಾಜಿಕ ಸಾಮರಸ್ಯಕ್ಕೂ ಉತ್ತೇಜನ ದೊರೆಯುತ್ತದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಹೇಳಿದರು.
ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದ್ದ 34ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಅಲಂಕೃತ ವಾಹನಗಳ ಮೆರವಣಿಗೆಗೆ ಹಳೆ ತಾಲೂಕಿನಲ್ಲಿ ಈಡುಗಾಯಿ ಒಡೆದು ಚಾಲನೆ ನೀಡಿ ಅವರು ಮಾತನಾಡಿದರು.
ನಾಲ್ಕು ನಾಡು ವ್ಯಾಪ್ತಿಯ ಆಟೋ ಚಾಲಕರು ತಮ್ಮ ವೃತ್ತಿಯ ಮೂಲಕ ಜೀವನ ನಿರ್ವಹಿಸುತ್ತಿದ್ದು, ಪ್ರತಿವರ್ಷ ಇಂತಹ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ವಿಚಾರವಾಗಿದೆ. ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವು ಇನ್ನಷ್ಟು ವೈಭವದಿಂದ ನಡೆಯಲಿ ಎಂದು ಅವರು ಆಶಿಸಿದರು.
ತಮ್ಮ ಹಿಂದಿನ ಅನುಭವಗಳನ್ನು ಹಂಚಿಕೊಂಡ ಪೊನ್ನಣ್ಣ, 1984ರಲ್ಲಿ ತಮ್ಮ ತಂದೆ ಬೆಂಗಳೂರಿನಲ್ಲಿ ಬಹುಜನ ಸಮಾಜ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭವನ್ನು ಸ್ಮರಿಸಿದರು. ಆಗ ಕಾರ್ಯಕರ್ತರ ಕೊರತೆಯಿದ್ದ ಕಾರಣ, ತಾವೇ ಸುಮಾರು 20ರಿಂದ 25 ದಿನಗಳ ಕಾಲ ಬೆಳಿಗ್ಗೆ ಆಟೋ ಚಾಲನೆ ಮಾಡಿ, ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ, ಕರಪತ್ರಗಳನ್ನು ಹಂಚುವ ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರು ದ್ವಿಚಕ್ರ ವಾಹನ ಚಲಾಯಿಸುವ ಮೂಲಕ ಅಲಂಕೃತ ವಾಹನಗಳ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಬಗೆಯಲ್ಲಿ ಅಲಂಕರಿಸಲಾಗಿದ್ದ ಆಟೋಗಳು ಹಾಗೂ ಇತರ ವಾಹನಗಳ ಮೆರವಣಿಗೆಯು ಹಳೆ ತಾಲೂಕಿನಿಂದ ಆರಂಭಗೊಂಡು ನಾಪೋಕ್ಲು ಮಾರುಕಟ್ಟೆ ಆವರಣದವರೆಗೆ ಸಾಗಿತು. ಬಳಿಕ ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜೆ ನೆರವೇರಿಸಲಾಯಿತು.
ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ, ಸನ್ಮಾನ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳೊಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ವರದಿ: ದುಗ್ಗಳ ಸದಾನಂದ

















