
ನಾಪೋಕ್ಲು ಫೆ.27 NEWS DESK : ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಾಲಯದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು. ಮಧ್ಯಾಹ್ನ ಭಕ್ತರಿಂದ ತುಲಾಭಾರ ಸೇವೆ ನೆರವೇರತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ನಡೆಯಿತು. ಬಳಿಕ ಇಗ್ಗುತ್ತಪ್ಪ ದೇವರ ಪ್ರದರ್ಶನ, ನೃತ್ಯ ಬಲಿ ಹಾಗೂ ಭಕ್ತಾದಿಗಳಿಂದ ಹರಕೆ ಕಾಣಿಕೆ ಒಪ್ಪಿಸುವುದು, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಆರೋಗ್ಯ ಭಾಗ್ಯ ಹಾಗೂ ಸಕಾಲದಲ್ಲಿ ಮಳೆ ಬೆಳೆ ಬಂದು ನಾಡಿನಲ್ಲೆಡೆ ಭಕ್ತಾದಿಗಳಿಗೆ ಸುಭಿಕ್ಷೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ತಂತ್ರಿಗಳಾಗಿ ಗೋಪಾಲಕೃಷ್ಣ ಕೆದಿಲಾಯ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚುರ ರವೀಂದ್ರ ಮಾತನಾಡಿ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ ಎಂದರು. ಈ ಸಂದರ್ಭ ಕಾರ್ಯದರ್ಶಿ ಅಪ್ಪಚ್ಚಿರ ಪೊನ್ನಪ್ಪ, ದೇವತಕ್ಕರಾದ ಮಚ್ಚುರ ರಮೇಶ್, ನಾಡುತಕ್ಕರಾದ ಕೆ.ಪಿ.ಪೊನ್ನಮಯ್ಯ, ತೋಳಂಡ ದೇವಯ್ಯ, ಮೇಕ್ ಮಣಿಯಂಡ ಈರಪ್ಪ, ಬೊಟ್ಟೋಳಂಡ ಪುವಯ್ಯ, ಪೊನ್ನಣಿ, ಆನೆಯಡ ರಾಮಯ್ಯ, ತಾಪಂಡ ವರುಣ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ತಾಪಂಡ ಅಪ್ಪಣ್ಣ, ಮೂವೇರ ಪೆಮ್ಮಯ್ಯ, ಆನೆಯಡ ಗಣೇಶ್, ತೆಕ್ಕಡ ಭೀಮಯ್ಯ, ಮೂವೇರ ವಿನು, ತಾಪಂಡ ಗಣೇಶ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಪ್ರಮುಖರು ಹಾಗೂ ಊರ ಮತ್ತು ಪರವೂರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









