
ಮಡಿಕೇರಿ ಫೆ.28 NEWS DESK : ಪ್ರತಿವರ್ಷದಂತೆ ಈ ಬಾರಿಯೂ ಭಾಗಮಂಡಲದ ಶ್ರೀ ಭಗಂಡೇಶ್ವರ–ತಲಕಾವೇರಿ ದೇವಾಲಯದಲ್ಲಿ ಸಂಪ್ರದಾಯದಂತೆ ಮಹಾಶಿವರಾತ್ರಿಯ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಫೆ.26 ರಂದು ಮುಂಜಾನೆಯಿಂದಲೇ ಶತರುದ್ರಾಭಿಷೇಕ, ರುದ್ರಹೋಮ ನಡೆಯಿತು. ಮಧ್ಯಾಹ್ನ ರುದ್ರಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಂಜೆ ತಾಯಂಬಕ ಸೇವೆ, ಲಕ್ಷದೀಪೋತ್ಸವ, ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ ನಡೆಯಿತು. ಇದೇ ಸಂದರ್ಭ ಭಜನೆ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ರಾತ್ರಿ ದೇವರ ತ್ರಿವೇಣಿ ಸಂಗಮ ಬೇಟಿ, ದೇವರ ಕಟ್ಟೆಪೂಜೆ ಮತ್ತು ಬಾಣಬಿರುಸು ಕಾರ್ಯಕ್ರಮ ನೆರವೇರಿತು. ನಂತರ ಯಕ್ಷ ಕಾವ್ಯ ತರಂಗಿಣಿ ಭಾಗವತ ದಿ|| ಚಂದಪ್ಪ ಪೂಜಾರಿ ಪ್ರತಿಷ್ಠಾನ (ರಿ) ದರ್ಬೆ ಬಂಟ್ವಾಳ ದಕ್ಷಿಣ ಕನ್ನಡ ಇವರಿಂದ ಸ್ವರ ಮಾಧುರಿ ಕಾವ್ಯ ಕನ್ನಿಕೆ ಬಿರುದಾಂಕಿತ ಸಂದ್ಯಾ ಪೂಜಾರಿ ದರ್ಬೆ ಇವರ ದಕ್ಷ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ-ಪ್ರಸಂಗ “ಹರಿ ಹರ ಸುತ ಶ್ರೀ ಧರ್ಮಶಾಸ್ತ” ನಡೆಯಿತು. ರಂಗೋಲಿ ಸ್ಪರ್ಧೆ :: “ಮಹಾಶಿವರಾತ್ರಿ” ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು.
ತಲಕಾವೇರಿ :: ತಲಕಾವೇರಿ ದೇವಾಲಯದಲ್ಲಿ ಮುಂಜಾನೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಏಕಾದಶರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.









