
ವಿರಾಜಪೇಟೆ ಮಾ.3 NEWS DESK : ಪವಿತ್ರ ರಮ್‍ಝಾನ್ ತಿಂಗಳಿನಲ್ಲಿ ಮಸೀದಿಗಳಲ್ಲಿ ಬೆಳಗ್ಗಿನ ನಮಾಜ್ ಕರೆ (ಆಝಾನ್)ಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಂತೆ ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ಶಾಖೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಶಾಸಕರ ನಿವಾಸದಲ್ಲಿ ಮನವಿ ಸಲ್ಲಿಸಿದ ಶಾಖೆಯ ಪ್ರಮುಖರು ಹಾಗೂ ಪದಾಧಿಕಾರಿಗಳು, ಈ ಹಿಂದಿನ ಸರಕಾರ ಹೊರಡಿಸಿರುವ ಆದೇಶವನ್ನು ನಾವು ಗೌರವಿಸಿ ಪಾಲಿಸುತ್ತಿದ್ದೇವೆ. ಆದರೆ ಕನಿಷ್ಟ ರಮ್‍ಝಾನ್ ತಿಂಗಳಿನ ವೇಳೆಯಲ್ಲಾದರೂ ಆದೇಶಕ್ಕೆ ವಿನಾಯ್ತಿ ನೀಡಬೇಕೆಂಬುದು ಮನವಿ ಮಾಡಿದರು. ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ಶಾಖೆಯ ಅಧ್ಯಕ್ಷ ಸಿ.ಹೆಚ್.ರಫೀಖ್, ಉಪಾಧ್ಯಕ್ಷ ಮನಾಫ್, ಸಮಿತಿ ಸದಸ್ಯರುಗಳಾದ ಅರ್ಬಾಸ್, ಹಕೀಂ ಮುಸ್ಲಿಯಾರ್, ಅನೀಸ್ ಹಾಗೂ ಅನ್‍ಸಬ್ ಹಾಜರಿದ್ದರು. ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್ ಪದಾಧಿಕಾರಿಗಳು “ಪವಿತ್ರ ರಮಝಾನ್ ತಿಂಗಳಿನಲ್ಲಿ ಮುಂಜಾನೆಯ ಸಹರಿ ಮತ್ತು ನಮಾಝಿನ ವೇಳೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಆಝಾನ್ ಉಪಯುಕ್ತವಾಗುತ್ತದೆ. ಧ್ವನಿವರ್ಧಕದಲ್ಲಿ ಆಝಾನ್ ಕರೆ ನಿಷೇಧಿಸಿ ಈ ಹಿಂದಿನ ಸರಕಾರ ಹೊರಡಿಸಿರುವ ಆದೇಶವನ್ನು ನಾವು ಗೌರವಿಸಿ ಪಾಲಿಸುತ್ತಿದ್ದೇವೆ. ಆದರೆ ಕನಿಷ್ಟ ರಮ್‍ಝಾನ್ ತಿಂಗಳಿನ ವೇಳೆಯಲ್ಲಾದರೂ ಆದೇಶಕ್ಕೆ ವಿನಾಯ್ತಿ ನೀಡಬೇಕೆಂಬುದು ಮನವಿ ಮಾಡಿದ ಅವರು, ಶಾಸಕರು ತಮಗೆ ಅನುಕೂಲವಾದ ನಿಲುವು ಕೈಗೊಳ್ಳುವ ನಿರೀಕ್ಷೆ ಇದೆ ಎಂದರು.









