
ಮಡಿಕೇರಿ ಮಾ.3 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ “ದಿ.ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ” ಯು ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು ರಚಿಸಿದ “ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ” ಕೃತಿಯು ಪುರಸ್ಕೃತ ಗೊಂಡಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್.ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ “ಶ್ರೀ ಕಾವೇರಿ ದರ್ಶನಂ -ಸಮಗ್ರ ಕಾವೇರಿ ಚರಿತೆ” ಕೃತಿಯ ಲೇಖಕ ನಾಗೇಶ್ ಕಾಲೂರು ಪಡೆದುಕೊಂಡಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









