
ವಿರಾಜಪೇಟೆ ಮಾ.4 NEWS DESK : ಕುಟ್ಟಂದಿಯ ಹೆಗ್ಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಸುರಕ್ಷಾ ಅಧಿಕಾರಿಯಾಗಿ 36 ವರ್ಷ 8 ತಿಂಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆ.ಕೆ.ರಮಿತ ಅವರಿಗೆ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ಅವರು, 1988 ರಲ್ಲಿ ಕರ್ತವ್ಯಕ್ಕೆ ಸೇರಿದ ಅವರು 36 ವರ್ಷ ಹಾಗೂ 8 ತಿಂಗಳ ಸುದೀರ್ಘ ಸೇವೆ ಸಲ್ಲಿಸಿ ಕರ್ತವ್ಯದ ಸಂದರ್ಭದಲ್ಲಿ ತಮ್ಮ ಉತ್ತಮ ಸೇವೆಗಾಗಿ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ತೋರಿದ್ದಕ್ಕಾಗಿ ಕೇಂದ್ರ ಸರ್ಕಾರದಿಂದ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮೀಣ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಕುಟ್ಟಂದಿ ಆರೋಗ್ಯ ಉಪ ಕೇಂದ್ರದ ವೈದ್ಯರಾದ ಡಾ.ಶರಣ್ ಸುಬ್ಬಯ್ಯ, ಶುಶ್ರೂಷಕಿಯರು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಕೆ.ಕೆ.ರಮಿತ ಹಾತೂರು ಗ್ರಾಮದ ಚೇಂದಂಡ ರಾಜ ಪೂಣಚ್ಚ ಅವರ ಪತ್ನಿ ಹಾಗೂ ಪೊನ್ನಂಪೇಟೆ ನಡಿಕೇರಿ ಗ್ರಾಮದ ಕೋಳೆರ ಕರುಂಬಯ್ಯ ಹಾಗೂ ಶಾಂತಿ ದಂಪತಿಗಳ ಪುತ್ರಿ.









