
ಮಡಿಕೇರಿ ಮಾ.4 NEWS DESK : ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೊಡಗು ವಿವಿ ಮುಚ್ಚದಂತೆ ಒತ್ತಾಯಿಸಿ ಕೊಡಗು ವಿವಿ ಬೋಧಕರು, ಬೋಧಕೇತರರು, ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಬೈಕ್ ಜಾಥಾದ ಮೂಲಕ ಮುಖ್ಯಮಂತ್ರಿಗಳಿಗೆ ಅಂಚೆ ಚೀಟಿ ಅಭಿಯಾನ ಮಾಡಿದರು. ಚಿಕ್ಕಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರದ ತಹಸೀಲ್ದಾರ್ ಕಚೇರಿಯವರೆಗೆ ಸುಮಾರು 16 ಕಿಮೀ ಬೈಕ್ ಜಾಥಾದಲ್ಲಿ ಕ್ರಮಿಸಿ ತಾಲ್ಲೂಕು ಕೇಂದ್ರ ಕುಶಾಲನಗರಕ್ಕೆ ಧಾವಿಸಿದ ತಂಡ ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಕೊಡಗು ವಿವಿ ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷ ವಿ.ಪಿ.ಶಶಿಧರ್, ಕೊಡಗು ವಿವಿ ಕೊಡಗಿನ ನೆಲದ ಹೆಮ್ಮೆಯ ಪ್ರತೀಕವಾಗಿದೆ. ಸರ್ಕಾರ ಯಾವುದೇ ಇರಲಿ, ತಟ್ಟೆಗೆ ಊಟ ಬಡಿಸಿ ಹಸಿದವರಿಗೆ ಕೊಟ್ಟು ಕಿತ್ತುಕೊಳ್ಳುವ ಕೆಲಸ ಮಾಡಬಾರದು. ಇಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನ ಇಲ್ಲದಿದ್ದರೂ ವಿವಿ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಇನ್ಫೋಸಿಸ್, ಟಾಟಾ ಕಂಪೆನಿ ಸೇರಿದಂತೆ ಹೆಸರಾಂತ ಉದ್ಯಮ ಸಂಸ್ಥೆಗಳ ಜೊತೆ ಸಂಪರ್ಕ ಮಾಡಿ ಕೊಡಗು ವಿವಿಗೆ ಆರ್ಥಿಕ ಸಹಾಯ ಕೋರಲಾಗಿತ್ತು. ಇನ್ನೇನು ಅನುದಾನ ಬರಬೇಕು ಎನ್ನುವಷ್ಟರಲ್ಲಿ ಸರ್ಕಾರದಿಂದ ಕಳೆದ ಒಂದು ವರ್ಷದಿಂದಲೂ ವಿವಿ ಮುಚ್ಚುವ ಗುಸು ಗುಸು ಕೇಳಿ ಬರುತ್ತಲೇ ಇತ್ತು. ಜೊತೆಗೆ ವಿವಿಯ ಒಳಗಿರುವ ಕೆಲವು ಹಿತಶತ್ರುಗಳು ವಿವಿ ಮುಚ್ಚುತ್ತೆ ಎಂಬ ವ್ಯವಸ್ಥಿತ ಅಪಚಾರ ಮಾಡುತ್ತಾ ಬಂದಿದ್ದಾರೆ. ಈಗಲೂ ಮುಂದುವರೆಸಿದೆ. ಇದನ್ನು ಸಹಿಸಲಾಗದು ಎಂದರು.
ಮಂಗಳೂರು ವಿವಿ ಅಧೀನದಲ್ಲಿ ಜ್ಞಾನ ಕಾವೇರಿ ಇದ್ದಾಗ ಏನೆಲ್ಲಾ ಆವಾಂತರಗಳು ನಡೆದಿದ್ದವು ಎಲ್ಲಾ ಮಾಹಿತಿ ಇದೆ. ಆದರೆ ಕೊಡಗು ಜಿಲ್ಲೆಗೆ ಸ್ವಾಯತ್ತ ವಿವಿ ಘೋಷಣೆಯಾಗಿ ಪೂರಕವಾದ ಅನುದಾನ ಹರಿದು ಬಂದರೆ ಕೊಡಗು ವಿವಿ ರಾಜ್ಯದಲ್ಲಿಯೇ ವಿಶೇಷ ವಿವಿ ಯಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ವಿವಿಯನ್ನು ಮುಚ್ಚುವ ನಿರ್ಧಾರದಿಂದ ದೂರಸರಿಯಬೇಕು ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಶಾಸಕ ಡಾ.ಮಂತರಗೌಡರ ನೇತೃತ್ವದಲ್ಲಿ ಈ ತಿಂಗಳ 7 ರ ನಂತರ ಕೊಡಗು ವಿವಿ ಹಿತರಕ್ಷಣಾ ಸಮಿತಿಯಿಂದ ನಿಯೋಗ ಬೆಂಗಳೂರಿಗೆ ತೆರಳಿದೆ ಎಂದು ಶಶಿಧರ್ ಹೇಳಿದರು. ಕೊಡಗು ವಿವಿ ಅಧ್ಯಾಪಕರ ಪರವಾಗಿ ಮಾತನಾಡಿದ ಡಾ.ಜಮೀರ್ ಅಹಮದ್, ಕೊಡಗು ವಿವಿಗೆ ಮಾರ್ಚ್ 28ಕ್ಕೆ ಎರಡು ವರ್ಷ ತುಂಬುತ್ತಿದೆ. ಈಗಾಗಲೇ ಕಳೆದ ಎರಡು ವರ್ಗಗಳಲ್ಲಿ ವಿವಿ ಶೈಕ್ಷಣಿಕವಾಗಿ ಬಹಳಷ್ಟು ಮೈಲಿಗಲ್ಲು ಸಾಧಿಸಿದೆ. ಕೊಡಗಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ದೇಶದ ಬೇರೆ ಬೇರೆ ಪ್ರತಿಷ್ಠಿತ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಕೊಡಗು ವಿವಿ 12 ಕೌಶಲ್ಯಾಭಿವೃದ್ಧಿ ಕೋರ್ಸ್ ಗಳನ್ನು ತೆರೆದು ವಿದ್ಯಾರ್ಥಿಗಳ ಜೀವನ ಭದ್ರತೆಗೆ ಮುಂದಾಗಿದೆ. ಕೆಲವರು ವಿವಿಯ ವಿರುದ್ಧವೇ ಅಪಪ್ರಚಾರ ಮಾಡುತ್ತಾ ವಿವಿಗೆ ಕಂಟಕರಾಗಿದ್ದಾರೆ. ಆದ್ದರಿಂದ ಕೊಡಗು ವಿವಿಯ ಬಗ್ಗೆ ಟೀಕೆ ಮಾಡುವ ಯಾರೇ ಬೇಕಾದರೂ ಅಗತ್ಯ ಅಂಕಿ ಅಂಶಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು. ರಾಜ್ಯ ಸರ್ಕಾರ ಕೂಡಲೇ ಕೊಡಗಿನ ಪ್ರಾಕೃತಿಕ ಸನ್ನಿವೇಶಕ್ಕನುಗುಣವಾಗಿ ಇಲ್ಲಿ ತೆರೆಯಲಾದ ವಿವಿಯನ್ನು ಮುಚ್ಚಬಾರದು ಎಂದು ಮನವಿ ಮಾಡಿದರು. ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಮೂರ್ತಿ, ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಟಿ.ಬಿ.ಜಗದೀಶ್ ಸೇರಿದಂತೆ ವಿವಿಯ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.









