
ಮಡಿಕೇರಿ ಮಾ.4 NEWS DESK : ಕೊಡಗು ವಿಶ್ವ ವಿದ್ಯಾನಿಲಯವನ್ನು ರದ್ದುಗೊಳಿಸಬಾರದು, ಸಿ ಮತ್ತು ಡಿ ಭೂಮಿಯ ಗೊಂದಲ ನಿವಾರಿಸಬೇಕು, ಪರಿಶಿಷ್ಟರ ಅನುದಾನವನ್ನು ಉಚಿತ ಭಾಗ್ಯಗಳಿಗೆ ಬಳಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾ.6ರ ಬೆಳಿಗ್ಗೆ 10 ಗಂಟೆಯಿಂದ ಮಾ.7ರ ಮಧ್ಯಾಹ್ನ 2 ಗಂಟೆಯವರೆಗೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಕೊಡಗು ಜಿಲ್ಲಾ ಬಿಜೆಪಿ ನಿರ್ಧರಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮೂರು ಪ್ರಮುಖ ಬೇಡಿಕೆಗಳು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ನಡೆಸುವ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮಾ.11 ರಂದು ಸ್ವಯಂ ಪ್ರೇರಿತ ‘ಕೊಡಗು ಬಂದ್’ ಗೆ ಕರೆ ನೀಡುವುದಾಗಿ ತಿಳಿಸಿದರು. ಕೊಡಗಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಬಿಜೆಪಿ ನಡೆಸುವ ಹೋರಾಟಕ್ಕೆ ರಾಜ್ಯ ಸರ್ಕಾರ ತನ್ನ ಬಜೆಟ್ ಅಧಿವೇಶನದಲ್ಲೇ ಸ್ಪಂದಿಸಬೇಕು. ತಪ್ಪಿದಲ್ಲಿ ಬಂದ್ ಗೆ ಕರೆ ಕೊಡುವುದು ಅನಿವಾರ್ಯವಾಗುತ್ತದೆ ಎಂದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಜಿಲ್ಲೆಯ ಶಾಸಕರ ನಿರಂತರ ಪ್ರಯತ್ನಗಳ ಫಲವಾಗಿ ಕೊಡಗು ವಿವಿ ಸ್ಥಾಪನೆ ಸಾಧ್ಯವಾಯಿತು. ಚಿಕ್ಕಅಳುವಾರದ ಕೊಡಗು ವಿವಿಯಲ್ಲಿ ಈಗಾಗಲೆ ಅದಕ್ಕೆ ಅಗತ್ಯವಾದ ಕಟ್ಟಡ, ವಸತಿ ನಿಲಯ ಎಲ್ಲವನ್ನು ಒದಗಿಸಲಾಗಿದೆ. ವಿವಿಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ವಾರ್ಷಿಕ 5 ರಿಂದ 6 ಕೋಟಿ ಅನುದಾನವನ್ನು ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ವಿಚಾರ ಎಂದು ಟೀಕಿಸಿದ ಅವರು, ಕೊಡಗು ವಿವಿ ರದ್ದುಗೊಳಿಸಲು ಬಿಜೆಪಿ ಅವಕಾಶ ನೀಡುವುದಿಲ್ಲವೆಂದರು. ಕೊಡಗಿನ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸುವ ಸರ್ಕಾರದ ಚಿಂತನೆಗಳ ವಿರುದ್ಧ ಈ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲೆ ಹೋರಾಟ ನಡೆದಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಕೊಡಗು ವಿವಿ ಉಳಿಸಿ ಹೋರಾಟದ ನೇತೃತ್ವವನ್ನು ಕಾಂಗ್ರೆಸ್ ನ ವಿ.ಪಿ.ಶಶಿಧರ್ ವಹಿಸಿದ್ದರು ಪ್ರಯೋಜನವಾಗಿಲ್ಲ. ಈ ಎಲ್ಲಾ ಹೋರಾಟಗಳು ತೋರ್ಪಡಿಕೆಯಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನಾಪಂಡ ರವಿ ಕಾಳಪ್ಪ, ಜಿಲ್ಲೆಯ ಶಾಸಕರು ಮೂಲಭೂತ ಸಮಸ್ಯೆಗಳ ಬಗೆಹರಿಕೆಗೆ ಅಧಿವೇಶನದ ಬಾವಿಗಿಳಿದು ಹೋರಾಟವನ್ನು ರೂಪಿಸಲಿ ಎಂದು ಒತ್ತಾಯಿಸಿದರು. ರಾಜ್ಯದ ಕಳೆದ ಎರಡು ಬಜೆಟ್‍ಗಳಲ್ಲಿ ಪರಿಶಿಷ್ಟರ ಅಭಿವೃದ್ಧಿಗಾಗಿ ಶೇ.22 ರಷ್ಟು ಅಂದರೆ ಅನುಕ್ರಮವಾಗಿ 11 ಸಾವಿರ ಕೋಟಿ ಮತ್ತು 14 ಸಾವಿರ ಕೋಟಿ, ಒಟ್ಟಾಗಿ 25 ಸಾವಿರ ಕೋಟಿ ಅನುದಾನವನನ್ನು ಮೀಸಲಿಡಲಾಗಿತ್ತು. ಪರಿಶಿಷ್ಟರು, ಅಹಿಂದ ಪರವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾgಸೀ ಹಣವನ್ನು ಉಚಿತ ಭಾಗ್ಯಗಳಿಗೆ ಬಳಸಿ ಕೊಂಡಿದೆ ಎಂದು ಆರೋಪಿಸಿದರು. ಪ್ರಸಕ್ತ ಸಾಲಿನಲ್ಲಿ ಕಾಫಿ ಉತ್ಪಾದನೆ ಶೇ.60 ರಷ್ಟು ಕುಂಠಿತವಾಗಿದ್ದರೂ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಬೆಳೆಗಾರರಿಗೆ ತಲಾ 54 ಸಾವಿರ ರೂ. ಪರಿಹಾರವನ್ನು ನೀಡಿತ್ತು, ಅದೇ ರೀತಿಯಲ್ಲಿ ಈಗಿನ ಸರ್ಕಾರ ಕೂಡ ಪರಿಹಾರ ಒದಗಿಸಬೇಕು. ರೈತರ 10 ಹೆಚ್.ಪಿ ಒಳಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕು, ಬಿಲ್ ಕಟ್ಟಲಿಲ್ಲವೆನ್ನುವ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು. ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ. ಖಾಸಗಿ ಜಮೀನುಗಳಲ್ಲಿನ ಮರಗಳ ಸರ್ವೇ, ಧಾರ್ಮಿಕ ಕಾರ್ಯಗಳಲ್ಲಿ ಬಳಸುವ ವನ್ಯಜೀವಿ ಉತ್ಪನ್ನಗಳಾದ ಕೊಂಬು, ಗರಿಗಳ ಬಳಕೆ ನಿಷೇಧಕ್ಕೆ ತಾತ್ಕಾಲಿಕವಾಗಿ ತಡೆಯಿದ್ದರು, ಮುಂದೊಂದು ದಿನ ಮತ್ತೆ ಸಮಸ್ಯೆ ಉದ್ಭವಿಸಬಹುದು. ಆದ್ದರಿಂದ ಈ ಆದೇಶಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗಿದೆ ಎಂದು ರವಿ ಕಾಳಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿಕೆ.ಅರುಣ್ ಕುಮಾರ್ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಹಾಗೂ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಉಪಸ್ಥಿತರಿದ್ದರು.









