


ವಿರಾಜಪೇಟೆ ಮಾ.5 NEWS DESK : ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ನಿಶ್ವಾರ್ಥ ಸೇವೆಯು ಸಮಾಜದಲ್ಲಿ, ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಜಿ.ಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬೇಟೋಳಿ ಗ್ರಾಮದ ಹೆಗ್ಗಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ವಾರ್ಷಿಕ ಶಿಬಿರದವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಮಾಜಕ್ಕೆ ಮೌಲ್ಯಾಧರಿತ ಸೇವೆಗಳ ಅವಶ್ಯಕತೆಯಿದೆ. ರೈತನು ಹೊಲದಲ್ಲಿ ದುಡಿದು. ಜನಸಾಮಾನ್ಯರ ಹಸಿವು ನೀಗಿಸುತ್ತಾನೆ. ಸೈನಿಕ ದೇಶದ ಗಡಿ ಕಾಯುತ್ತಾ ದೇಶವನ್ನು ಕಪಾಡುತ್ತಾನೆ. ಸಮಾಜದಲ್ಲಿ ಗುರುತಿಸಿಕೊಳ್ಳಲು ಉತ್ತಮ ನಾಯಕತ್ವ ಗುಣಗಳು, ಸೇವೆಗೆ ಮುಡಿಪಾಗಿಟ್ಟ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಜೀವನದಿಂದಲೇ ಸೇವಾ ಮನೋಭಾವ ಬೆಳಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಸಂತ ಅನ್ನಮ್ಮ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮುದಲೈ ಮುತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿ, ಯಾಂತ್ರಿಕೃತ ಸಮಾಜದಲ್ಲಿ ಕೃತಕ ಬುದ್ದಿಮತ್ತೆ ಎಂಬುದು ಅನಿವಾರ್ಯವಾಗಿ ಪರಿಣಮಿಸಿದೆ. ಮನುಜರ ನಡುವೆ ಸಂಬಂಧಗಳಿಗೆ ಬೆಲೆ ಇಲ್ಲಾದಾಗಿದೆ. ಆದರೆ ಮನುಜನ ಪ್ರೀತಿ, ಸಹಬಾಳ್ವೆ ಇಲ್ಲದೆಹೋದಲ್ಲಿ ಯಾವುದೇ ಕಾರ್ಯಗಳು ವ್ಯರ್ಥವಾಗುತ್ತದೆ. ಒಡೆದ ಮನೆಯಲ್ಲಿ ಸಂಬಂಧಗಳು ಗೌರವಯುತವಾಗಿತ್ತು. ಆದರೆ ಇಂದು ಅರಮನೆಯಂತಹ ಮನೆಯಿದ್ದರು ಸಂಬಂಧಗಳು ಕಣ್ಮರೆಯಾಗಿದೆ. ಸಮಾಜದ ಉದ್ದಾರಕ್ಕಾಗಿ, ಸಮಾಜದ ಒಳಿತಿಗಾಗಿ ಸೇವೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು. ಬೇಟೋಳಿ ಗ್ರಾ.ಪಂ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಮೊದಲಿಗೆ ನಿವೃತ್ತ ಭೂಸೇನಾ ಅಧಿಕಾರಿಗಳಾದ ಭವಾನಿ, ಶಂಕರ್ ಧ್ವಜರೋಹಣ ನೆರವೇರಿಸಿ, ಶಿಬಿರಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸಜೇಶ್ ಭರತನ್, ಶಾಲಾ ಮುಖ್ಯೋಪದ್ಯಾಯರಾದ ಹೇಮಲತ, ಶಿಬಿರಾರ್ಥಿಗಳು, ಉಪನ್ಯಾಸಕರು, ಸ.ಮಾ.ಪ್ರಾ. ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು. ಎನ್.ಎಸ್.ಎಸ್ ಅಧಿಕಾರಿ ಶಾಂತಿಭೂಷಣ್ ಸ್ವಾಗತಿಸಿದರು. ಸ.ಮಾ.ಪ್ರಾ ಶಾಲೆಯ ಶಿಕ್ಷಕಿ ಶೈಲಜ ನಿರೂಪಿಸಿದರು, ಶಿಕ್ಷಕಿ ಐರನ್ ಡಿಸೋಜಾ ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ