


ಮಡಿಕೇರಿ ಮಾ.5 NEWS DESK : ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸುಂಟಿಕೊಪ್ಪ ಕಂಬಿಬಾಣೆಯ ಯುವಕನ ಶಸ್ತ್ರಚಿಕಿತ್ಸೆಗೆ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಖರ್ಚಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾನ್ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪ ಕಂಬಿಬಾಣೆಯ ನಿವಾಸಿ ಯು.ಎಂ.ಆಸಿಂ ಹಾಗೂ ಕೆ.ಎಂ.ಆರಿಫ್ ದಂಪತಿಯ ದ್ವಿತೀಯ ಪುತ್ರ ಎಂ.ಎ.ಆಬಿದ್ (23) ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಶ್ವಾಸಕೋಶದ ಬದಲಾವಣೆ (ಶ್ವಾಸಕೋಶದ ಕಸಿ) ಮಾಡಬೇಕೆಂದು ಚೆನ್ನೈನ ಎಂಜಿಎಂ ಆಸ್ಪತ್ರೆಯ ವೈದ್ಯಾಧಿಕಾರಿ ಸೂಚಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆಗೆ ಸುಮಾರು 60 ಲಕ್ಷಕ್ಕೂ ಅಧಿಕ ರೂ. ಖರ್ಚಾಗಲಿದ್ದು, ದೊಡ್ಡ ಮೊತ್ತದ ಹಣವನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಾಗದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಉಸ್ಮಾನ್ ಕೋರಿದರು.
ಕಳೆದ 13 ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಆಬಿದ್, ಮಂಗಳೂರಿನಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಅನಾರೋಗ್ಯದಿಂದ ಮನೆಗೆ ಹಿಂತಿರುಗಿ ಬಂದಿದ್ದು, ಜನವರಿಯಲ್ಲಿ ಶ್ವಾಸಕೋಶದ ಸಮಸ್ಯೆ ತೀವ್ರಗೊಂಡಿದೆ. ಚಿಕಿತ್ಸೆ ಪಡೆದು ಹಣದ ಕೊರತೆಯಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗಾಗಲೇ ಯೂಟ್ಯೂಬ್ ಚಾನಲ್ ಪ್ರಚಾರದಿಂದ ಕೇರಳದ ಅಮರ್ಶನ್ ಫೌಂಡೇಶನ್ ಮೂಲಕ ಸುಮಾರು 10 ಲಕ್ಷ ರೂ. ಸಂಗ್ರಹವಾಗಿದ್ದು, ಇನ್ನೂ 50 ಲಕ್ಷ ರೂ. ಅಗತ್ಯವಿದೆ. ಆದ್ದರಿಂದ ದಾನಿಗಳು ಸಹಕರಿಸುವಂತೆ ಮನವಿ ಮಾಡಿದರು. ಸಮಾಜ ಸೇವಕ ಎಸ್.ಎ.ಸತ್ತಾರ್ ಮಾತನಾಡಿ, ಯುವಕನ ಶಸ್ತ್ರಚಿಕಿತ್ಸೆಗಾಗಿ ಕಳೆದ ಮೂರು ದಿನಗಳಿಂದ ನಿರಂತರ ಪ್ರಚಾರ ನಡೆಸಲಾಗಿದ್ದು, ಎಲ್ಲಾ ಧರ್ಮೀಯರು ಆರ್ಥಿಕ ಸಹಕಾರ ನೀಡುವಂತೆ ಕೋರಿದರು. ದಾನಿಗಳು ಸಹೋದರ ಎಂ.ಎ.ಅನ್ಸಾರ್ ಖಾತೆ ಸಂಖ್ಯೆ 19310200006775, IFSC : FDRL0001931, BRANCH : KUSHALNAGAR FEDERAL BANK, MOB : 6360261378 ಸಂಪರ್ಕಿಸಬಹುದಾಗಿದೆ. ಫೋನ್ಪೇ ಅಥವಾ ಗೂಗಲ್ಪೇ ಸಂಖ್ಯೆ 8762457510, 6360216119, 7736452565 ಸಂಖ್ಯೆಯ ಮೂಲಕ ಖಾತೆಗೆ ಕಳುಹಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಹೋದರ ಎಂ.ಎ.ಅಸ್ಸಾರ್, ಕೇರಳದ ಅಮರ್ಶನ್ ಫೌಂಡೇಶನ್ನ ಎಂ.ಅಮರ್ಶನ್, ಏಳನೇ ಹೊಸಕೋಟೆ ಗ್ರಾ.ಪಂ ಮಾಜಿ ಸದಸ್ಯ ಕೆ.ಎ.ಅಬ್ದುಲ್ಲ ಕುಟ್ಟಿ, ಕುಟುಂಬಸ್ಥರಾದ ಟಿ.ಎ.ಉಮ್ಮರ್ ಉಪಸ್ಥಿತರಿದ್ದರು.