


ಪನೀರ್ ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಎ, ಮ್ಯಾಂಗನೀಸ್, ಪ್ರೋಟೀನ್, ವಿಟಮಿನ್ಗಳು ಮತ್ತು 9 ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಕೊಲೆಸ್ಟ್ರಾಲ್ ಮುಕ್ತವಾದ ಆಹಾರವೂ ಹೌದು. ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಬೇಕಾಗುವ ಪದಾರ್ಥಗಳು :: ಎಣ್ಣೆ- 2 ಚಮಚ, ಜೀರಿಗೆ- 1 ಚಮಚ, ಈರುಳ್ಳಿ- 1 ಸಣ್ಣಗೆ ಹೆಚ್ಚಿದ್ದು, ಉಪ್ಪು- ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ- 1 ಸಣ್ಣಗೆ ಹೆಚ್ಚಿದ್ದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಅಚ್ಚಖಾರದ ಪುಡಿ- ಅರ್ಧ ಚಮಚ, ಟೊಮೆಟೋ- 1 ಸಣ್ಣಗೆ ಹೆಚ್ಚಿದ್ದು, ಅರಿಶಿನ- ಸ್ವಲ್ಪ, ಗರಂ ಮಸಾಲಾ- ಅರ್ಧ ಚಮಚ, ಪನೀರ್- 2 ಕಪ್ ನಷ್ಟು ಸಣ್ಣಗೆ ಪುಡಿಪುಡಿ ಮಾಡಿದ್ದು, ಕಸೂರಿ ಮೇಥಿ- 1 ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ :: ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯ್ಯಾಡಿಸಿ. ನಂತರ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ ಸುಮಾರು 3 ನಿಮಿಷ ಬಿಡಿ. ನಂತರ ಕಸೂರಿ ಮೇಥಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪನೀರ್ ಬುರ್ಜಿ ಸವಿಯಲು ಸಿದ್ಧ.