


ಗೋಣಿಕೊಪ್ಪ ಮಾ.6 NEWS DESK : ಗೋಣಿಕೊಪ್ಪ ಪಟ್ಟಣದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬೆಂಗಳೂರಿನಿಂದ ಟ್ರಾಫಿಕ್ ತಜ್ಞರ ಸಲಹೆ ಪಡೆದು ಬಗೆಹರಿಸಲಾಗುವುದು ಎಂದು ವಿರಾಜಪೇಟೆ ತಾಲ್ಲೂಕು ಪೊಲೀಸ್ ಉಪಾಧೀಕ್ಷಕ ಜಯಕುಮಾರ್ ಭರವಸೆ ನೀಡಿದರು. ಪರಿಮಳ ಮಂಗಳ ವಿಹಾರದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಟೋ ರಿಕ್ಷಗಳು, ಬಸ್ಸುಗಳ ಸಂಚಾರ ಮತ್ತು ನಿಲುಗಡೆ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು. ಅಗಲಿಕರಣಗೊಳ್ಳದ ಕಿರಿದಾದ ರಸ್ತೆಗಳಿಂದ ಮತ್ತು ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಇದನ್ನು ನಿಯಂತ್ರಿಸಲು ಸ್ಥಳೀಯ ವರ್ತಕರ ಸಹಕಾರ ಅಗತ್ಯ ಎಂದು ಡಿವೈಎಸ್ಪಿ ಮನವಿ ಮಾಡಿದರು. ಚಾಲಕರು ಹಾಗೂ ವ್ಯಾಪಾರಿಗಳು ತಮ್ಮ ವೈಯಕ್ತಿಕ ಇಚ್ಚೆಗಳ ನಡುವೆಯೂ ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಹೊಂದಿದಾಗ ಪಟ್ಟಣದ ಬಹುತೇಕ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಪೊಲೀಸರ ಜತೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಡಿದರು. ಪೊನ್ನಂಪೇಟೆ ತಿರುವಿನಲ್ಲಿ ಸಿಗ್ನಲ್ ಅಳವಡಿಕೆ, ಸಿ.ಸಿ. ಕ್ಯಾಮೆರ ಅಳವಡಿಕೆ, ಹೆಚ್ಚು ಟ್ರಾಫಿಕ್ ಸಿಬ್ಬಂಧಿಗಳ ನಿಯೋಜನೆ, ವಾಹನ ನಿಲುಗಡೆಗೆ ಕ್ರಮಬದ್ದ ವ್ಯವಸ್ಥೆ ರೂಪಿಸುವಂತೆ, ಸ್ವಾತಂತ್ರ್ಯ ಹೋರಾಟಗಾರರ ಭವನದ ಸಂಚಾಲಕ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಜಿ.ಪಂ. ನ್ಯಾಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಆಟೋ ಚಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿಮ್ಮ ಸುಬ್ಬಯ್ಯ, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ಶಾಫಿ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಸಭೆಯ ಗಮನಕ್ಕೆ ತಂದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ದಲಿತರ ಸಮಸ್ಯೆಗಳಿಗೆ ಸ್ಪಂದನೆಯಾಗುವ ದಲಿತಪರ ಸಭೆಗಳನ್ನು ನಡೆಸುವಂತೆ ಮನವಿ ಮಾಡಿದರು. ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್.ಗೋವಿಂದಪ್ಪ, ಮಾದಕ ಪದಾರ್ಥಗಳ ಮಾರಾಟ, ಸೇವನೆ, ಒಂದಕ್ಕಿ ಕೇರಳ ಲಾಟರಿ ಮಾರಾಟದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು. ಬಗರ್ ಹುಕುಂ ಸಮಿತಿ ತಾಲೂಕು ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ, ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಬಗ್ಗೆ, ಹೆಲ್ಮೆಟ್ ಧರಿಸದೇ ದ್ವಿಚಕ್ರ ಚಾಲನೆ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಂ.ಎಸ್.ಸುಬ್ರಮಣಿ, ಮಳವಂಡ ಅರವಿಂದ್ ಕುಟ್ಟಪ್ಪ, ಖಾಸಗಿ ಬಸ್ಸ್ ಚಾಲಕರ ರಾಜ ಮಾತನಾಡಿದರು. ವೃತ್ತನಿರೀಕ್ಷ ಶಿವರಾಜ್ ಆರ್. ಮುದೋಳ್, ಠಾಣಾಧಿಕಾರಿಗಳಾದ ಪ್ರದೀಪ್ ಕುಮಾರ್, ಕಾವೇರಪ್ಪ, ಸಿಬ್ಬಂದಿಗಳಾದ ವಿರೇಶ್, ಕಾವೇರಮ್ಮ, ಇತರರು ಇದ್ದರು.