ಸೋಮವಾರಪೇಟೆ NEWS DESK ಡಿ.18 : ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ 20 ಕೋಟಿ ರೂ. ವೆಚ್ಚದಲ್ಲಿ ಕೂಡುರಸ್ತೆ, ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮದ 10 ಕಿ.ಮೀ ವ್ಯಾಪ್ತಿಯ ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಕೂಡುರಸ್ತೆ ಜಂಕ್ಷನ್‌ನಲ್ಲಿ ಲೋಕೂಪಯೋಗಿ ಇಲಾಖೆ ಅಧಿಕಾರಿಗಳನ್ನು ರಸ್ತೆಯಲ್ಲಿ ತಡೆದು ತರಾಟೆಗೆ ತೆಗೆದುಕೊಂಡರು. ಮಾಗಡಿ, ಜಾಲ್ಸೂರು ಎಸ್.ಎಚ್. 85 ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಕಂದೂರು, ಹೊಸಬೀಡು, ತೋಳೂರುಶೆಟ್ಟಳ್ಳಿ, ಹರಪಳ್ಳಿ, ಇನಕನಹಳ್ಳಿ, ಕೂತಿ, ಎಡದಂಟೆ ಸೇರಿದಂತೆ ಇನ್ನಿತರ ಗ್ರಾಮಗಳ ಜನರ ಹತ್ತಾರು ವರ್ಷಗಳ ರಸ್ತೆ ಕನಸು ನನಸಾಗುವ ಹಂತದಲ್ಲಿರುವಾಗ, ಗುತ್ತಿಗೆದಾರರು ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕೂತಿ ಗ್ರಾಮಸ್ಥರು ದೂರಿದರು. ರಸ್ತೆ ಕಾಮಗಾರಿ ಸಂದರ್ಭ ಗ್ರಾಮಸ್ಥರು ತಮ್ಮ ಜಾಗದಲ್ಲಿದ್ದ ಮರದ ರೆಂಬೆಗಳನ್ನು ತೆಗೆದುಕೊಟ್ಟು ಸಹಕಾರ ನೀಡಿದ್ದಾರೆ. ಆದರೂ ಬೇಕಾಬೆಟ್ಟಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕೂತಿ ಗ್ರಾಮದ ಉಪಾಧ್ಯಕ್ಷ ಕೆ.ಡಿ.ಗಿರೀಶ್ ದೂರಿದರು. ಹೆಚ್ಚಿನ ರಸ್ತೆ ಕಾಮಗಾರಿಗಳು ಕಳಪೆಯಾಗುತ್ತಿರುವುದರಿಂದ ಬಾಳಿಕೆ ಬರುತ್ತಿಲ್ಲ. ಸರ್ಕಾರ ಹಣ ಪೋಲಾಗುತ್ತಿದೆ. ಕಳಪೆ ಕಾಮಗಾರಿಗಳಿಗೆ ಕೆಲ ಇಂಜಿನಿಯರ್‌ಗಳೇ ಕಾರಣ ಎಂದು ಕೂತಿ ದಿವಾಕರ್ ದೂರಿದರು. ಗುಣಮಟ್ಟದ ರಸ್ತೆ ಕಾರ್ಯ ನಡೆಸದೆ ಹೋದರೆ ರಸ್ತೆ ತಡೆದು ಪ್ರತಿಭಟಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಎ.ಇ.ಇ ಕುಮಾರ್. ಇಂಜಿನಿಯರ್ ಹರ್ಬಜ್ ಇದ್ದರು. ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಕೂತಿ ಗ್ರಾಮಸ್ಥರಾದ ಜೈರಾಜ್. ಯಾದವ್. ಲಕ್ಷ್ಮಣ್, ಸಂಜು. ಮತ್ತಿತರರು ಇದ್ದರು.










