


ಮಡಿಕೇರಿ ಮಾ.7 NEWS DESK : ಕೊಡಗು ವಿಶ್ವ ವಿದ್ಯಾನಿಲಯವನ್ನು ಜಿಲ್ಲೆಯಲ್ಲೇ ಉಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾ.6ರಿಂದ ಆರಂಭಿಸಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬಿಜೆಪಿ ಮುಕ್ತಾಯಗೊಳಿಸಿದೆ. ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಎರಡನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಹಣಕಾಸಿನ ವೈಫಲ್ಯಗಳ ಹಿನ್ನೆಲೆಯಲ್ಲಿ ಕೊಡಗು ವಿವಿಯನ್ನು ಒಳಗೊಂಡಂತೆ 9 ವಿವಿಗಳಿಗೆ ಅಗತ್ಯ ನೆರವನ್ನು ನೀಡದ ರಾಜ್ಯ ಸರ್ಕಾರ ವಿವಿಗಳ ‘ವಿಲೀನ’ದ ಕುರಿತು ಮಾತನಾಡುತ್ತಿದೆ. ಈ ವಿಲೀನ ಎಂಬುವುದು ಅಂತಿಮವಾಗಿ ವಿವಿಗಳನ್ನು ಮುಚ್ಚುವುದೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾವ ಭೂಮಿ ನಿಮಗೆ ಆಶ್ರಯವನ್ನು ನೀಡಿದೆಯೋ ಅಂತಹ ನೆಲದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಈ ಹಿಂದೆ ಕೊಡಗಿನ ಜಮ್ಮಾಬಾಣೆ ಸಮಸ್ಯೆ ಸಂದರ್ಭ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲು ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಹಾಗೂ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಅವರು ಸದನದಲ್ಲೆ ಕೊಡಗಿನ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದರು. ಇದೀಗ ಇರುವ ಜಿಲ್ಲೆಯ ಇಬ್ಬರು ಶಾಸಕರು ಕೊಡಗಿನ ಪರವಾಗಿದ್ದಾರೆಯೇ ಅಥವಾ ಸರ್ಕಾರದ ಪರವಾಗಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವು ಜನಪರ ಕಾರ್ಯಕ್ರಮಗಳನ್ನು ಈಗಿನ ಸರ್ಕಾರ ರದ್ದುಗೊಳಿಸುತ್ತಾ ಬರುತ್ತಿದೆ. ಇದೀಗ ಕೊಡಗು ವಿವಿಯನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೊಡಗು ವಿವಿಯನ್ನು ರದ್ದುಗೊಳಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶವಿದೆ ಎಂದರು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಮಾನವನ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈಲ್ವೆ ಹಳಿಯ ಬೇಲಿ ನಿರ್ಮಾಣದ ಪ್ರಯತ್ನ ನಡೆದಿತ್ತು. ಪ್ರಸ್ತುತ ಕಾಡಾನೆ ಹಾವಳಿ ತಡೆಗೆ 22 ಕೋಟಿ ರೂ. ಅನುದಾನದ ಆದೇಶವಷ್ಟೆ ಮಾಡಲಾಗಿದೆ. ಹಣ ಬಂದಿಲ್ಲ, ಹೀಗಿದ್ದೂ ಕ್ರಿಯಾಯೋಜನೆಗೆ ಮೊದಲೇ ಭೂಮಿಪೂಜೆ ಮಾಡಲಾಗಿದೆ ಎಂದು ಲೇವಡಿ ಮಾಡಿದರು. ಜಿಲ್ಲಾ ಬಿಜೆಪಿ ಪ್ರಮುಖ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಬಳಿಕದ ಅವಧಿಯಿಂದ ಸುದೀಘರ್ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಕೊಡಗಿನತ್ತ ಮಲತಾಯಿ ಧೋರಣೆಯನ್ನೆ ಅನುಸರಿಸುತ್ತಾ ಬಂದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಏನು ಮಾಡಿದೆ ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲೆಸೆದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮನವಿಪತ್ರ ಸಲ್ಲಿಸುವುದರೊಂದಿಗೆ ಅಹೋರಾತ್ರಿ ಪ್ರತಿಭಟನೆ ಮುಕ್ತಾಯವಾಯಿತು. ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.