


ಮಡಿಕೇರಿ NEWS DESK ಮಾ.9 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನ್ನು ನೆಪಮಾಡಿಕೊಂಡು ಬಿಜೆಪಿ ಮತ್ತೆ ಅಲ್ಪಸಂಖ್ಯಾತರ ಅವಹೇಳನದಲ್ಲಿ ತೊಡಗಿದೆೆ. ಪ್ರತಿಯೊಂದು ವಿಚಾರದಲ್ಲೂ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿರುವ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಎಂದಿಗೂ ಫಲಿಸುವುದಿಲ್ಲವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಣಕಾಸು ಖಾತೆಯ ಬಗ್ಗೆ ಹೆಚ್ಚು ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಮಪಾಲು, ಸಮಬಾಳು’ ಎಂಬ ಅರ್ಥದಲ್ಲಿ ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ ಸರ್ವರಿಗೂ ಸಮಾನವಾದ ಆದ್ಯತೆ ನೀಡಿದ್ದಾರೆ. ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ರಾಜ್ಯ ಅಭಿವೃದ್ಧಿಪಥದಲ್ಲಿ ಸಾಗುತ್ತದೆ ಎನ್ನುವ ಗುರಿಯೊಂದಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ತಾವು ಮಂಡಿಸಿದ ದೊಡ್ಡ ಗಾತ್ರದ ಬಜೆಟ್ ನಲ್ಲಿ ಶೇ.1ರಷ್ಟನ್ನು ಮಾತ್ರ ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಆದರೆ ಬಿಜೆಪಿ ಮಂದಿ ಇದನ್ನೇ ದೊಡ್ಡದು ಮಾಡಿ ಅಲ್ಪಸಂಖ್ಯಾತರ ತೇಜೋವಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರು ಈ ದೇಶಕ್ಕೆ ಹೊರೆಯಾಗಿಲ್ಲ, ಅಲ್ಪಸಂಖ್ಯಾತರು ಕೂಡ ಎಲ್ಲರಂತೆ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರು ಸಮಾನರು ಎನ್ನುವ ಸಂವಿಧಾನದ ಆಶಯಕ್ಕೆ ಬದ್ಧರಾಗಿ ಜೀವನ ಸಾಗಿಸುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಬಹಳ ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಮಾಡುತ್ತಲೇ ಬಂದಿದೆ. ಸಂವಿಧಾನದ ಸಿದ್ಧಾಂತಕ್ಕೆ ಸದಾ ಗೌರವ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯಯುತವಾಗಿ ಹಂಚಿಕೆಯಾಗಬೇಕಾದ ಅನುದಾನವನ್ನು ಘೋಷಿಸಿದ್ದಾರೆ. ಆದರೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲದ ಬಿಜೆಪಿ ಇದನ್ನು ವಿರೋಧಿಸುತ್ತಿದೆ ಎಂದು ಟೀಕಿಸಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಬಜೆಟ್ ನಲ್ಲಿ ಕೊಡಗು ಜಿಲ್ಲೆಯ ರಸ್ತೆ, ಆಸ್ಪತ್ರೆ, ಕ್ರೀಡಾಶಾಲೆ, ವನ್ಯಜೀವಿ ಹಾವಳಿ ತಡೆಗೆ ಪರಿಹಾರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಇದನ್ನು ಸಹಿಸದ ಬಿಜೆಪಿ ಮಂದಿ ಹತಾಶ ಮನೋಭಾವದಿಂದ ಇಲ್ಲಸಲ್ಲದ ಆರೋಪ ಮಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಎಂ.ಎ.ಕಲೀಲ್ ಬಾಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ಥಾನದ ಘನತೆಯನ್ನು ಮರೆತು ಅಲ್ಪಸಂಖ್ಯಾತರ ಕುರಿತು ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡೆ ಖಂಡನೀಯವೆಂದು ತಿಳಿಸಿರುವ ಅವರು, ಜನಪರ ಕಾಳಜಿಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಬಹುದೆನ್ನುವ ಭ್ರಮೆಯಿಂದ ಬಿಜೆಪಿ ಹೊರಬರಬೇಕು ಎಂದು ಒತ್ತಾಯಿಸಿದ್ದಾರೆ.