


ಮಡಿಕೇರಿ NEWS DESK ಮಾ.9 : ವಿವಿಧ ತೋಟಗಳ ಕಣದಲ್ಲಿ ಒಣಗಿಸಲು ಇಟ್ಟಿದ್ದ ಕಾಫಿಯನ್ನು ಕಳವು ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮದ ಶಾಂತಿನಗರದ ನಿವಾಸಿಗಳಾದ ಕೆ.ಬಿ.ಶಫೀಕ್ (26), ಟಿ.ಜೆ.ಪ್ರಾನ್ಸಿಸ್ (29), ಪೊನ್ನಪ್ಪಸಂತೆ ಗ್ರಾಮದ ಎಂ.ಬಿ.ಯಾಸಿನ್ (28) ಹಾಗೂ ನೋಕ್ಯ ಗ್ರಾಮದ ಅನೀಸ್ ಎಂ.ಜಿ (24) ಬಂಧಿತ ಆರೋಪಿಗಳು. ಬಂಧಿತರ ಬಳಿಯಿಂದ 2550 ಕೆ.ಜಿ ಕಾಫಿ, ಒಂದು ಪಿಕಪ್ ವಾಹನ, ಒಂದು ಮಾರುತಿ ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗ-ಬಾಣಂಗಾಲ ಗ್ರಾಮದ ಹುಂಡಿ ಪ್ರದೇಶದ ನಿವಾಸಿ ಸಜಿ ಥಾಮಸ್ ಅವರ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಅಂದಾಜು 12 ಚೀಲ ಹಸಿ ಕಾಫಿ ಇದೇ ಜ.16 ರಂದು ಮತ್ತು 800 ಕೆ.ಜಿ ಹಸಿ ಕಾಫಿ ಫೆ.26 ರಂದು ಕಳ್ಳತನವಾಗಿತ್ತು. ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಸಿದ್ದಾಪುರ ಪೊಲೀಸರು ತನಿಖೆ ಕೈಗೊಂಡಿದ್ದರು. ಮಡಿಕೇರಿ ಡಿವೈಎಸ್‌ಪಿ ಸೂರಜ್ ಪಿ.ಎ, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಪಿಎಸ್‌ಐಗಳಾದ ರಾಘವೇಂದ್ರ, ಶಿವಣ್ಣ ಹೆಚ್.ಟಿ, ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಡಿಸಿಅರ್‌ಬಿ ಘಟಕದ ಸಿಬ್ಬಂದಿಗಳು ಹಾಗೂ ತಾಂತ್ರಿಕ ಘಟಕ ನಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ಕಾಫಿ ಕಳವು ಮಾಡಿರುವುದು ವಿಚಾರಣೆ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಪೊಲೀಸರ ಕಾರ್ಯದಕ್ಷತೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.