


ಕುಶಾಲನಗರ ಮಾ.10 NEWS DESK : ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣು ತ್ಯಾಗದ ಸಂಕೇತ. ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ ಎಂದು ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷೆ ತೇಜ ದಿನೇಶ್ ಹೇಳಿದರು. ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ವತಿಯಿಂದ ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಇಂದು ಸಾಮಾಜಿಕ , ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದಾಳೆ ಎಂದರು. ಸಮಾಜದಲ್ಲಿ ಮಹಿಳೆ ವಿವಿಧ ರೀತಿಯ ಸ್ಥಾನಗಳನ್ನು ಅಲಂಕರಿಸುವ ಮೂಲಕ ನೀಡಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದಾಳೆ. ಅದರ ಜತೆಯಲ್ಲಿ ಆಕೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಿದೆ ಎಂದು ತೇಜ ದಿನೇಶ್ ಅಭಿಪ್ರಾಯಪಟ್ಟರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಮಾತನಾಡಿ, ‘ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಜೆಸಿಐ ಸಂಸ್ಥೆಯ ವತಿಯಿಂದ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು. ಮಹಿಳೆಯರ ಆರೋಗ್ಯ ರಕ್ಷಣೆ ಹಾಗೂ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವ ಕುರಿತು ತಾಲ್ಲೂಕು
ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಶಿಲ್ಪ ಮುತ್ತಣ್ಣ ಮಾಹಿತಿ ನೀಡಿದರು. ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಎನ್.ರಾಜೇಂದ್ರ ಮಾತನಾಡಿ, ಸಮಾಜದಲ್ಲಿ ಸ್ತ್ರೀಗೆ ಅರ್ಹ ಸ್ಥಾನಮಾನ ಕಲ್ಪಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು. ಜೆಸಿಐ ಸಂಸ್ಥೆಯ ವಲಯ – 14 ರ ಉಪಾಧ್ಯಕ್ಷ ಬಿ.ಜಗದೀಶ್, ಮಾಜಿ ಉಪಾಧ್ಯಕ್ಷ ಕೆ.ಡಿ.ಪ್ರಶಾಂತ್, ವಲಯದ ಮಾದ್ಯಮ ಸಮನ್ವಯಾಧಿಕಾರಿ ಎಂ.ಜೆ.ರಜನೀಕಾಂತ್ ಮಾತನಾಡಿದರು. ಸಂಸ್ಥೆಯ ವಲಯ ಮಾಜಿ ಉಪಾಧ್ಯಕ್ಷ ಕೆ.ಪ್ರವೀಣ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎ.ಸಿ.ಕಾವ್ಯಶ್ರೀ , ಜೇಸೀ ಸದಸ್ಯರಾದ ಆತ್ಮಾನಂದ, ಎಂ.ಶ್ರೀನಿವಾಸ್, ಕೋಮಲ, ಮೋಹನೇಶ್ವರಿ, ತಾಜನ್ ಕಾವೇರಮ್ಮ, ನೌಶಿನ , ಅಭಿಷೇಕ್, ಆಲ್ಬರ್ಟ್ , ಶಾಲಾ ಶಿಕ್ಷಕ – ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ಶಾಲೆಯ ವತಿಯಿಂದ ಜೆಸಿಐ ಕಾವೇರಿ ಸಂಸ್ಥೆಯ ಅಧ್ಯಕ್ಷೆ ತೇಜ ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.