
ಮಡಿಕೇರಿ ಮಾ.10 NEWS DESK : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದ್ದ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 2 ವರ್ಷಗಳನ್ನು ತೆಗೆದುಕೊಂಡಿದ್ದು, ರಾಜ್ಯ ಪ್ರಗತಿಯತ್ತ ಸಾಗುತ್ತಿದೆ. ಆದರೂ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರೀ ಪ್ರಮಾಣದ ಸಾಲವನ್ನು ಪಡೆದಿರುವುದಾಗಿ ಪ್ರತಿಪಕ್ಷ ಬಿಜೆಪಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಯಮಗಳನ್ನು ಮೀರಿ 350 ಲಕ್ಷ ಕೋಟಿ ರೂ. ಸಾಲವನ್ನು ಮಾಡಲಾಗಿತ್ತು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಬಾರಿ 1.16 ಲಕ್ಷ ಕೋಟಿ ರೂ. ಸಾಲ ಪಡೆಯುವ ಉದ್ದೇಶವನ್ನು ಹೊಂದಿತ್ತು. ಆದರೆ ಪಡೆದದ್ದು 65 ಸಾವಿರ ಕೋಟಿ ರೂ. ಸಾಲ ಮಾತ್ರವೆಂದು ಪ್ರತಿಪಾದಿಸಿದರು. ಬಿಜೆಪಿಯ ಪ್ರಮುಖರಾದ ಆರ್.ಅಶೋಕ್, ಚಲವಾದಿ ನಾರಾಯಣ ಸ್ವಾಮಿ ಮೊದಲಾದವರು ಬಜೆಟ್ ನ ಗಂಧ ಗಾಳಿ ಅರಿಯದೆ ವೃಥಾರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಳೆದ ಬಾರಿ 3.72 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದರೆ, ಈ ಬಾರಿ 4.09 ಲಕ್ಷ ಕೋಟಿಯ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಗಾತ್ರ ಸುಮಾರು 38,166 ಕೋಟಿಯಷ್ಟು ಹೆಚ್ಚಿದೆ, ಈ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದ ಒಟ್ಟು ವಹಿವಾಟು 22 ಲಕ್ಷ ಕೋಟಿ ಇದ್ದರೆ, ಇದೀಗ ಅದರ ಪ್ರಮಾಣ ರೂ.30 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ರಾಜ್ಯದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು. ಕಳೆದ ಬಿಜೆಪಿ ಅವಧಿಯಲ್ಲಿ ಕಾಮಗಾರಿಗಳ ಗುತ್ತಿಗೆದಾರರಿಗೆ ನೀಡಲು 40 ಲಕ್ಷ ಕೋಟಿ ರೂ.ಗಳನ್ನು ಬಾಕಿ ಉಳಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಲಕ್ಷ ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 65 ಸಾವಿರ ಕೋಟಿ ರೂ. ಒದಗಿಸಬೇಕಿದೆಯಾದರು, ನೀಡಿರುವುದು ಕೇವಲ ಶೇ.1 ರಷ್ಟು. ಅಂದರೆ 4100 ಕೋಟಿ ಮಾತ್ರ. ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಜನಸಮುದಾಯಗಳನ್ನು ತಲುಪುವಂತಹ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ವಕ್ತಾರ ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ಜಿಲ್ಲಾ ಕಾಂಗ್ರೆಸ್ ಸದಸ್ಯ ಖಾಲಿದ್ ಉಪಸ್ಥಿತರಿದ್ದರು.









