



ಮಡಿಕೇರಿ ಮಾ.19 NEWS DESK : ಗೌಡ ಮಹಿಳೆಯರು ಮತ್ತು ಯುವತಿಯರನ್ನು ಒಗ್ಗೂಡಿಸುವ ಹಾಗೂ ಗೌಡ ಜನಾಂಗದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟವನ್ನು ನೂತನವಾಗಿ ರಚಿಸಲಾಗಿದೆ. ಒಕ್ಕೂಟದ ಸಂಸ್ಥಾಪಕ ಸಂಚಾಲಕಿಯಾಗಿ ರೇವತಿ ರಮೇಶ್, ಅಧ್ಯಕ್ಷರಾಗಿ ಮೂಟೇರ ಪುಷ್ಪಾವತಿ ರಮೇಶ್, ಉಪಾಧ್ಯಕ್ಷರುಗಳಾಗಿ ಸುಳ್ಯ ತಾಲ್ಲೂಕು ಮಹಿಳಾ ಅಧ್ಯಕ್ಷರಾದ ವಿನುತ ಪೌತಿಕಲ್ಲು, ಸೋಮವಾರಪೇಟೆಯ ಅಶ್ವಿನಿ ಕೃಷ್ಣಕಾಂತ್, ಗೌರವ ಕಾರ್ಯದರ್ಶಿ ಮರಗೋಡಿನ ಮಂದ್ರೀರ ಸುಗೀತಾ ಜಯಪ್ರಕಾಶ್, ಕೋಶಾಧಿಕಾರಿ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸಹ ಕಾರ್ಯದರ್ಶಿಗಳಾಗಿ ಕುಟ್ಟನ ಶ್ವೇತ ಪ್ರಶಾಂತ್ ಹಾಗೂ ದುಗ್ಗಳ ಕಾವ್ಯ ಕಪಿಲ್ ಆಯ್ಕೆಯಾಗಿದ್ದಾರೆ. ನೂತನವಾಗಿ ಒಕ್ಕೂಟವನ್ನು ರಚಿಸಿರುವ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥಾಪಕ ಸಂಚಾಲಕಿ ರೇವತಿ ರಮೇಶ್ ಅವರು ಗೌಡರೆಂದರೆ ಒಕ್ಕಲಿಗರು, ಒಕ್ಕಲಿಗರೆಂದರೆ ಗೌಡರು ಎಂಬ ಮಾತಿನಂತೆ ಕೊಡಗು ಜಿಲ್ಲೆಯ ಅರೆಭಾಷಿಕ, ಒಕ್ಕಲಿಗ ಮಹಿಳೆಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರನ್ನು ಒಗ್ಗೂಡಿಸಲಾಗಿದೆ. ಕೊಡಗು ಅರೆಭಾಷೆ, ಒಕ್ಕಲಿಗ ಹಾಗೂ ದಕ್ಷಿಣ ಕನ್ನಡ ಗೌಡ ಮಹಿಳೆಯರೆಲ್ಲಾ ಒಂದೆಡೆ ಸೇರಿ ಸಮಾಲೋಚನೆ ನಡೆಸಿ ನೂತನ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದರು. ಗೌಡ ಜನಾಂಗದ ಸಂಸ್ಕೃತಿ ಮತ್ತು ಸಂಪ್ರಾದಾಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಾಬರೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಗೌಡ ಸಂಸ್ಕೃತಿ, ಸಂಪ್ರದಾಯಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಸ್ಪರ ಆಯೋಜಿಸಿ ವಿನಿಮಯ ಮಾಡಿಕೊಳ್ಳಲಾಗುವುದು. ಗೌಡ ಸಮಾಜ ಮತ್ತು ಸಂಘಗಳ ಸಹಕಾರದಿಂದ ವಿವಿಧ ಜಿಲ್ಲೆಗಳಲ್ಲಿ ಗೌಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗೌಡ ಸಮುದಾಯದ ಪ್ರತಿಭಾನ್ವಿತ ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು. ಗೌಡ ಸಮುದಾಯದ ವಿವಿಧ ಜನಪದ ಕ್ರೀಡೆ ಮತ್ತು ಇತರೆ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಎಲ್ಲಾ ಗೌಡ ಸಮುದಾಯದ ಮಹಿಳೆಯರನ್ನು ಒಗ್ಗೂಡಿಸಲಾಗುವುದು ಎಂದು ವಿವರಿಸಿದರು. ಅಧ್ಯಕ್ಷರಾದ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ ಗೌಡ ಸಮುದಾಯದ ಮಕ್ಕಳಲ್ಲಿ ಗೌಡ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಅರಿವು ಮೂಡಿಸಿ ಗೌಡ ಪರಂಪರೆಯನ್ನು ಉಳಿಸಿ ಬೆಳೆಸಲಾಗುವುದು ಎಂದು ತಿಳಿಸಿದರು. 2023-24ನೇ ಸಾಲಿನಲ್ಲಿ ಕೊಡಗು ಗೌಡ ಯುವ ವೇದಿಕೆಯ ನೇತೃತ್ವದಲ್ಲಿ ಕೊಡಗು ಗೌಡ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅದೇ ರೀತಿ ಈ ಸಾಲಿನಲ್ಲಿಯೂ ನೂತನವಾಗಿ ರಚನೆಗೊಂಡಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೇ 3 ಹಾಗೂ 4 ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗೌಡ ಮಹಿಳಾ ತಂಡಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಪ್ರಥಮ ಬಹುಮಾನ ರೂ.25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ಮತ್ತು ವೈಯುಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುವುದು ಎಂದರು. ಕಳೆದ ಸಾಲಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ತಂಡಗಳ ನೋಂದಣಿ ಆರಂಭಗೊಂಡಿದ್ದು, ಆಸಕ್ತರು ಅಧ್ಯಕ್ಷರು-9844963858, ಸಂಸ್ಥಾಪಕ ಸಂಚಾಲಕರು-9663254829, ಸಹ ಸಂಚಾಲಕರು-9900992360, ಉಪಾಧ್ಯಕ್ಷರು-8105240587, 8496866368 ನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷರಾದ ವಿನುತ ಪೌತಿಕಲ್ಲು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗೌಡ ಮಹಿಳಾ ಒಕ್ಕೂಟಗಳಿವೆ. ಇದೀಗ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರು ಒಗ್ಗೂಡಿ ಒಕ್ಕೂಟ ರಚನೆ ಮಾಡಿದ್ದು, ಗೌಡ ಜನಾಂಗದ ಆಚಾರ, ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಗೌಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು, ಕ್ರೀಡಾಕೂಟ ಮತ್ತು ವಿವಿಧ ಸ್ಪರ್ಧೆಗಳನ್ನು ಎರಡೂ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು. ಆ ಮೂಲಕ ಎರಡು ಜಿಲ್ಲೆಗಳ ಗೌಡ ಸಮುದಾಯದ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲಾಗುವುದು ಎಂದರು. ಉಪಾಧ್ಯಕ್ಷರಾದ ಅಶ್ವಿನಿ ಕೃಷ್ಣಕಾಂತ್, ಗೌರವ ಕಾರ್ಯದರ್ಶಿ ಮಂದ್ರೀರ ಸುಗೀತಾ ಜಯಪ್ರಕಾಶ್ ಹಾಗೂ ಕೋಶಾಧಿಕಾರಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಅರೆಭಾಷಿಕ, ಒಕ್ಕಲಿಗ ಮಹಿಳೆಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.