



ಮಡಿಕೇರಿ ಮಾ.19 NEWS DESK : ಮಡಿಕೇರಿ ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯ ಡಾ.ಅಂಬೇಡ್ಕರ್ ಭವನದ ಎದುರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಇಂದು ಭೂಮಿಪೂಜೆ ನೆರವೇರಿತು. ಡಾ.ಅಂಬೇಡ್ಕರ್ ಭವನ ಸಮಿತಿಯ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭೂಮಿಪೂಜೆ ನೆರವೇರಿಸಿ ಯೋಜನೆಗೆ ಚಾಲನೆ ನೀಡಲಾಯಿತು. ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹೆಚ್.ಎಂ.ನಂದಕುಮಾರ್, ಮುಂಬರುವ ಡಾ.ಅಂಬೇಡ್ಕರ್ ಜಯಂತಿಯೊಳಗೆ 15 ಅಡಿ ಎತ್ತರದ ಪೀಠದ ಮೇಲೆ 18 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದರು. ಕೆಲವು ಕಿಡಿಗೇಡಿಗಳು ಮಡಿಕೇರಿಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗಬಾರದು ಎನ್ನುವ ದುರುದ್ದೇಶದಿಂದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಚೌಕಟ್ಟಿನಡಿ ಅವಲೋಕಿಸಿದರೆ ಪ್ರತಿಮೆ ನಿರ್ಮಾಣಕ್ಕೆ ಅಂಬೇಡ್ಕರ್ ಭವನದ ಜಾಗವೇ ಸೂಕ್ತವಾಗಿದೆ. ಸೌಹಾರ್ದತೆಯಿಂದ ಎಲ್ಲರೂ ಸೇರಿ ಪ್ರತಿಮೆ ನಿರ್ಮಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಆದರೆ ಇದಕ್ಕೆ ಕೆಲವರು ಒಪ್ಪಿಗೆ ಸೂಚಿಸದೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಅಡ್ಡಿ ಎದುರಾದರೂ ಎಲ್ಲರ ಸಹಕಾರ ಪಡೆದುಕೊಂಡು ಪ್ರತಿಮೆ ಸ್ಥಾಪಿಸುವುದು ಶತಸಿದ್ಧವೆಂದರು. ಭೂಮಿಪೂಜೆ ಸಂದರ್ಭ ಡಾ.ಅಂಬೇಡ್ಕರ್ ಭವನ ಸಮಿತಿಯ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ, ಪ್ರಮುಖರಾದ ಡಾ.ಸತೀಶ್ ಹಾಗೂ ಬಿ.ಎನ್.ಮುದ್ದುರಾಜು ಹಾಜರಿದ್ದರು.