




ನಾಪೋಕ್ಲು ಮಾ.19 NEWS DESK : ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಾ.17 ರಂದು ಆರಂಭಗೊಂಡು ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಾಂಪ್ರದಾಯಕವಾಗಿ ಸಂಪನ್ನಗೊಂಡಿತ್ತು. ಆರಂಭದಲ್ಲಿ ತಕ್ಕರ ಮನೆಯಿಂದ ದೇವರ ಬಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ, ದೇವರ ಊರ ಪ್ರದಕ್ಷಿಣೆನೆರವೇರಿತು. ಬುಧವಾರ ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಿಗ್ಗೆ ದೇವರ ದರ್ಶನ ಅನಂತರ ಎತ್ತುಪೋರಾಟ, ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನದ ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಹರೀಶ್ ತಂತ್ರಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೆಕುಣ್ಣಾಯ, ಸುರೇಶ್ ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ (ಪುಂಡ) ನೆರವೇರಿಸಿಕೊಟ್ಟರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಶಿಕ್ಷಕ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ಕೆಲೇಟಿರ, ತಿರೋಡಿರ, ಕುಲ್ಲೇಟಿರ, ನಾಟೋಳಂಡ ತಕ್ಕ ಮುಖ್ಯಸ್ಥರ ಮುಂದಾಲತ್ವದಲ್ಲಿ ವಾರ್ಷಿಕ ಉತ್ಸವ ನಡೆಯಿತು. ವಿವಿಧೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ವರದಿ : ದುಗ್ಗಳ ಸದಾನಂದ.