







ಮಡಿಕೇರಿ ಮಾ.20 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋಧಕ ಆಸ್ಪತ್ರೆಯ ದಂತ ವಿಭಾಗದ ಸಹಯೋಗದಲ್ಲಿ “ಸಂತೋಷಕರ ಬಾಯಿ ಸಂತೋಷಕರ ಮನಸ್ಸು” ಎಂಬ ಘೋಷಣೆಯೊಂದಿಗೆ ಇಂದು ವಿಶ್ವ ಬಾಯಿ ಆರೋಗ್ಯ ದಿನಾಚರಣೆ ನಡೆಯಿತು. ನಗರದ ಭೋಧಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕ ಡಾ. ಎ.ಜೆ.ಲೋಕೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಾಯಿ ಹಾಗೂ ದಂತ ಆರೋಗ್ಯದ ಕಾಳಜಿ ವಹಿಸಲು ಸಲಹೆ ಮತ್ತು ಸೂಚನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಕೊಡಗಿನಲ್ಲಿ ಬಾಯಿ ಆರೋಗ್ಯ ಅರಿವು, ಬಾಯಿ ತಪಾಸಣೆ ಹಾಗೂ ದಂತ ಚಿಕಿತ್ಸೆಗಳಂತಹ ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ. ಜಿ.ಎಂ.ರೇವಣ್ಣ ಬಾಯಿ ಆರೋಗ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಡಾ.ರೂಪೇಶ್ ಗೋಪಾಲ್, ಬಾಯಿ ಆರೋಗ್ಯ ಮತ್ತು ಮಾನಸಿಕ ಅರೋಗ್ಯದ ಸಂಬಂಧ ಅಂತರ ಇಲಾಖಾ ಸಂಬಂಧ ಹಾಗೂ ಮಾನಸಿಕ ಒತ್ತಡದಿಂದಾಗುವ ರೋಗಗಳ ಬಗ್ಗೆ ಉಪನ್ಯಾಸ ನೀಡಿದರು. ದಂತ ವಿಭಾಗ ಮುಖ್ಯಸ್ಥ ಡಾ.ಎನ್.ಎಸ್.ಕೇದಾರನಾಥ, ಬಾಯಿ ಆರೋಗ್ಯ ಮತ್ತು ದೇಹದ ಆರೋಗ್ಯದ ಸಂಬಂಧ, ಬಾಯಿಯಲ್ಲಿ ಕಂಡುಬರುವ ರೋಗಲಕ್ಷಣಗಳು ಹಾಗೂ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದರು. ಡಾ. ಅಫ್ರೀನ್ ನಿರೂಪಿಸಿದರು. ಕೊ.ವೈ,ವಿ,ಸಂಸ್ಥೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸನತ್ ಕುಮಾರ್, ದಂತ ಆರೋಗ್ಯಾಧಿಕಾರಿ ಡಾ.ಅಮೂಲ್ಯ, ಡಾ.ಬಿಪಿನ್ ಜೋಷ್, ಡಾ.ಯಶ್ವಿನ್, ಡಾ.ನೂರ್ ಫಾತಿಮಾ ಮತ್ತು ದಂತ ಹೈಜಿನಿಸ್ಟ್ ಶ್ರೀ ಚೇತನ್ ಮತ್ತು ಕೊ.ವೈ,ವಿ,ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.