







ಮಡಿಕೇರಿ NEWS DESK ಮಾ.20 : ಸರ್ಕಾರಿ ಭೂಮಿ ಒತ್ತುವರಿ ಕುರಿತು ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹದ್ದು ಬಸ್ತ್ ಸರ್ವೆ ನಡೆಸಲು ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಅವರು ಇತ್ತೀಚೆಗೆ ಹೊದ್ದೂರಿನಲ್ಲಿ ರೈತ ಸಂಘದ ಹೆಸರಿನಲ್ಲಿ ನಡೆಸಿದ ಸಭೆಯಲ್ಲಿ ನಿವೇಶನ ರಹಿತ ಬಡವರ ಪರ ಹೋರಾಟ ನಡೆಸುತ್ತಿರುವವರ ವಿರುದ್ಧ ಮಾಡಿರುವ ಸುಳ್ಳು ಆರೋಪಗಳನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಹೊದ್ದೂರು ಗ್ರಾ.ಪಂ ಮತ್ತು ಮೂರ್ನಾಡು ಗ್ರಾ.ಪಂ ವ್ಯಾಪ್ತಿಯ ಸುಮಾರು 600 ರಿಂದ 700 ಬಡ ಕುಟುಂಬಗಳಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸರ್ಕಾರಿ ಭೂಮಿಯಲ್ಲಿ ನಮ್ಮ ಸಂಘಟನೆ ಹೋರಾಟ ನಡೆಸುತ್ತಿದೆ. ಆದರೆ ಕೆಲವು ಮಾಜಿ ಜನಪ್ರತಿನಿಧಿಗಳು ಬಡವರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಕಾಳಜಿ ತೋರುವ ಬದಲು ಉಳ್ಳವರ ಪರ ಸೇರಿಕೊಂಡು ಪ್ರತಿಭಟನಾ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಜಮಾಬಂಧಿ ಆಧಾರದಲ್ಲಿ ಹೊದ್ದೂರಿನಲ್ಲಿ ಹದ್ದು ಬಸ್ತ್ ಸರ್ವೇ ನಡೆಸಿ ನಿಖರ ಮಾಹಿತಿ ಸಂಗ್ರಹಿಸಬೇಕು. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮಾನದಂಡದಂತೆ 4.99 ಎಕರೆ ಒಳಗೆ ಮಾತ್ರ ಭೂಮಿಯ ಒಡೆತನವನ್ನು ರೈತರಿಗೆ ನೀಡಬೇಕು. ಉಳಿದ ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿರುವವರಿಂದ ತೆರವುಗೊಳಿಸಿ ಮೊಕದ್ದಮೆ ದಾಖಲಿಸಬೇಕು. ಅವರಗಳು 50, 53, 57 ಅರ್ಜಿ ಸಲ್ಲಿಸಿದ್ದಲ್ಲಿ ಅರ್ಜಿಯನ್ನು ಸರ್ಕಾರದ ಮಾನದಂಡದಂತೆ ರದ್ದುಪಡಿಸಬೇಕು. ಇವರುಗಳಿಗೆ ಭೂ ಗುತ್ತಿಗೆ ಕಾಯ್ದೆಯಡಿ ಅವಕಾಶ ನೀಡಬಾರದು, ಅಲ್ಲದೆ ಭೂ ಗುತ್ತಿಗೆ ಕಾಯ್ದೆಯನ್ನೇ ರದ್ದುಪಡಿಸಬೇಕು.
ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕುಟುಂಬಗಳಿಗೆ ಕೇವಲ ಮೂರು ಮುಕ್ಕಾಲು ಸೆಂಟ್ ಜಾಗ ನೀಡುವ ಬದಲಿಗೆ ಉಳುವವನಿಗೆ ಭೂಮಿ ಅಥವಾ ಕೃಷಿ ಕಾರ್ಯಕ್ಕೆ ಕನಿಷ್ಟ ಎರಡು ಎಕರೆ ಜಾಗ ಮಂಜೂರು ಮಾಡಬೇಕು ಎಂದು ಕೆ.ಮೊಣ್ಣಪ್ಪ ಒತ್ತಾಯಿಸಿದರು. ಬಡವರಿಗೆ ನಿವೇಶನ ನೀಡಬೇಕೆನ್ನುವ ಏಕೈಕ ಉದ್ದೇಶದಿಂದ ಸಂವಿಧಾನಬದ್ಧ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೊದ್ದೂರಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ಆದರೆ ಇದನ್ನು ಸಹಿಸದವರು ರೈತ ಸಂಘದ ಹೆಸರಿನಲ್ಲಿ ಸಭೆ ನಡೆಸಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ವೇದಿಕೆಯಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಬದಲು ನೇರ ಮುಖಾಮುಖಿ ಚರ್ಚೆಗೆ ಬರಲಿ, ಬಡವರಿಗೆ ನಿವೇಶನ ಒದಗಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ದಾಖಲೆ ಸಹಿತ ನಾವು ಹೋರಾಟ ನಡೆಸುತ್ತಿದ್ದು, ಸರ್ಕಾರದ ಭೂಮಿಯನ್ನಷ್ಟೇ ಕೇಳುತ್ತಿದ್ದೇವೆ. ನನ್ನ ವಿರುದ್ಧವೂ ಸುಳ್ಳು ಆರೋಪಗಳನ್ನು ಮಾಡಿದ್ದು, ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಪಿ.ಎ.ಕುಸುಮಾವತಿ, ಕಾರ್ಯದರ್ಶಿ ಜಗದೀಶ್ ಕಿರಣ್, ಪದಾಧಿಕಾರಿಗಳಾದ ಹನೀಫ್, ಸತೀಶ್ ಹಾಗೂ ಚಂದ್ರ ಉಪಸ್ಥಿತರಿದ್ದರು.