



ಮಡಿಕೇರಿ ಮಾ.25 NEWS DESK : ಕಳೆದ 20 ವರ್ಷಗಳಿಂದ ಬಹುಜನ ಸಮಾಜ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಕೆ.ಮೊಣ್ಣಪ್ಪ ಹಾಗೂ ಸಂಗಡಿಗರು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಹಾಗೂ ಕಾರ್ಯದರ್ಶಿ ಗೋಪಿನಾಥ್ ಅವರುಗಳು ಬೆಂಗಳೂರಿನಲ್ಲಿರುವ ರಾಜ್ಯ ಕಚೇರಿಯಲ್ಲಿ ಕೆ.ಮೊಣ್ಣಪ್ಪ ಸೇರಿದಂತೆ ಬೆಂಬಲಿಗರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷರನ್ನಾಗಿ ಕೆ.ಮೊಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ.ಕುಸುಮಾವತಿ, ಉಪಾಧ್ಯಕ್ಷರುಗಳಾಗಿ ಟಿ.ಜಗದೀಶ್ ಕಿರಣ್, ಹೆಚ್.ಜಿ.ಮಾದೇಶ ಹಾಗೂ ಕಾರ್ಯದರ್ಶಿಯನ್ನಾಗಿ ಎಂ.ಕೆ.ಮೊಹಮ್ಮದ್ ಹನೀಫ್ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಆದೇಶ ಹೊರಡಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಕೆ.ಮೊಣ್ಣಪ್ಪ ಅವರು ಬಹುಜನ ಸಮಾಜ ಪಾರ್ಟಿಯಲ್ಲಿ ಸುಮಾರು 20 ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಬಿ.ಎಸ್.ಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಕೆಲವು ಪಕ್ಷ ವಿರೋಧಿ ನಾಯಕರುಗಳಿಂದ ಪಕ್ಷದ ಅಸ್ತಿತ್ವಕ್ಕೆ ದಕ್ಕೆ ಬಂದ ಹಿನ್ನೆಲೆ ಕೊಡಗಿನ ಸಾವಿರಾರು ಕಾರ್ಯಕರ್ತರು ಅನಿವಾರ್ಯವಾಗಿ ತಟಸ್ಥ ಧೋರಣೆ ಅನುಸರಿಸಬೇಕಾಯಿತು. ಇದೀಗ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಂಡು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು. ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲಾಗುವುದು, ಬಡವರ ಹಕ್ಕಿಗಾಗಿ ಹೋರಾಟ ನಡೆಸಲಾಗುವುದು. “ಎಲ್ಲರಿಗೂ ಸಮಬಾಳು ಮತ್ತು ಸಮಪಾಲು” ಎಂಬ ಘೋಷವಾಕ್ಯದೊಂದಿಗೆ ಪದಾಧಿಕಾರಿಗಳು ಅತಿ ನಿಷ್ಠೆಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.