



ಮಡಿಕೇರಿ ಮಾ.25 NEWS DESK : ಮುಸಲ್ಮಾನರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮಾಜಿ ಶಾಸಕರುಗಳು, ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಗಳು ಸಂಪುಟದಿಂದಲೆ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಸಂವಿಧಾನದ ರಕ್ಷಕರು ತಾವೆನ್ನುವ ಕಾಂಗ್ರೆಸ್ ಪರಿಶಿಷ್ಟರು ಮತ್ತು ಡಾ.ಅಂಬೇಡ್ಕರ್ ಅವರುಗಳ ಹೆಸರನ್ನು ಹೇಳುತ್ತಲೆ ಅವರನ್ನು ತುಳಿಯುವ ಕೆಲಸವನ್ನು ಈ ಹಿಂದಿನಿಂದಲು ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಅಲ್ಪಸಂಖ್ಯಾತರಿಗೆ ಗಣನೀಯ ಸವಲತ್ತು ಒದಗಿಸುವ ಸಿದ್ದರಾಮಯ್ಯ ಅವರ ಬಡ್ಜೆಟ್ ಅವರೇ ಹೇಳುವಂತೆ ಚರಿತ್ರಾರ್ಹವಾದ ಬಡ್ಜೆಟ್ ಎಂದು ವ್ಯಂಗ್ಯವಾಡಿದರು. ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುವ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಅಲ್ಪಸಂಖ್ಯಾತರು ಅರಿತುಕೊಳ್ಳಬೇಕು, ಅವರ ಮಾತಿಗೆ ಮರುಳಾಗಬಾರದು. ಧರ್ಮದ ಆಧಾರದಲ್ಲಿ ಮೀಸಲಾತಿ ಎಂದಿಗೂ ಸಾಧ್ಯವಿಲ್ಲ. ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯ ಈ ಬಗ್ಗೆ ಸ್ಪಷ್ಟನೆಗಳನ್ನು ನೀಡಿದೆ. ಅಗತ್ಯತೆಗಳಿಗೆ ತಕ್ಕಂತೆ ಸಂವಿಧಾನಕ್ಕೆ ತಿದ್ದುಪಡಿಗಳನ್ನಷ್ಟೆ ಮಾಡಬಹುದು. ಇಲ್ಲಿಯವರೆಗೆ ಸಂವಿಧಾನಕ್ಕೆ ತಂದಿರುವ ಸುಮಾರು 106 ತಿದ್ದುಪಡಿಗಳಲ್ಲಿ, ಎಂಭತ್ತಕ್ಕೂ ಹೆಚ್ಚಿನ ತಿದ್ದುಪಡಿಗಳನ್ನು ತಂದಿರುವುದು ಕಾಂಗ್ರೆಸ್ ಎಂದು ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ವಾರಕ್ಕೊಂದು ಹಗರಣ ನಡೆಯುತ್ತಿದೆ, ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ ಒಂದು ವರ್ಗವನ್ನಷ್ಟೆ ಕೇಂದ್ರೀಕರಿಸಿ ಇತರರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸುವುದಾಗಿ ತಿಳಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಮಹಿಳಾ ಮೋರ್ಚಾ ಪ್ರಮುಖರಾದ ರೀನಾ ಪ್ರಕಾಶ್, ಮಹಿಳಾ ಬಿಜೆಪಿ ಮಾಜಿ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ತಳೂರು ಕಿಶೋರ್ ಕುಮಾರ್, ಪ್ರಮುಖರಾದ ಕೆ.ಎಸ್.ರಮೇಶ್, ಕನ್ನಂಡ ಸಂಪತ್, ಎಸ್.ಸಿ.ಸತೀಶ್, ನಾಗೇಶ್ ಕುಂದಲ್ಪಾಡಿ, ಬಿ.ಕೆ.ಜಗದೀಶ್, ಬಿ.ಕೆ.ಅರುಣ್ ಕುಮಾರ್, ಪಿ.ಎಂ.ರವಿ, ಸಜಿಲ್ ಕೃಷ್ಣನ್, ಅರುಣ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
::: ಹುಲ್ಲು ಹೊತ್ತೊಯ್ದ ಪೊಲೀಸರು ::: ಪ್ರತಿಭಟನೆಗಾಗಿ ಬಿಜೆಪಿ ಕಚೇರಿಯ ಮುಂಭಾಗ ಪ್ರತಿಕೃತಿ ರಚನೆಗೆ ಇರಿಸಿದ್ದ ಹುಲ್ಲನ್ನು ಪೊಲೀಸರು ವಶಪಡಿಸಿಕೊಂಡು ಹೊತ್ತೊಯ್ದ ಹಿನ್ನೆಲೆ ಬಿಜೆಪಿ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಮಾಜಿ ಶಾಸಕರುಗಳು ಯಾರದೋ ಆದೇಶದಂತೆ ಹುಲ್ಲನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ, ಅವರಿಗೆ ಆದೇಶ ನೀಡಿದವರಾರು ಎಂದು ಪ್ರಶ್ನಿಸಿದರು. ಪ್ರತಿಕೃತಿಗಳನ್ನು ದಹಿಸುವುದು ಯಾವುದೇ ಕಾರಣಕ್ಕೂ ಅಪರಾಧವಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದನ್ನು ನ್ಯಾಯಾಲಯವೂ ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು.