





ಮಡಿಕೇರಿ ಏ.2 NEWS DESK : ಕೊಡಗು ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮವು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಸ್.ಸುಧೀಶ್ ಕುಮಾರ್ ಅವರಿಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ವಿತರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶ್ವಾನದಳ ವಿಭಾಗದಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮನಮೋಹನ್ ಅವರಿಗೆ ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ಉತ್ತಮ ಪೊಲೀಸ್ ಟ್ರೋಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಿತರಿಸಿದರು. ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಅವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಬದುಕಿಗೆ ಪೊಲೀಸ್ ಇಲಾಖೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಪ್ರಮುಖವಾಗಿದೆ ಎಂದರು. ಪೊಲೀಸರ ವೃತ್ತಿಯು ದಿನದ 24 ಗಂಟೆಯೂ ಸಹ ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪ್ರತೀ ನಿತ್ಯ ಎಚ್ಚರದಿಂದ ಕರ್ತವ್ಯ ನಿರ್ವಹಿಸುವ ಪೊಲೀಸರು ಮಕ್ಕಳ ವಿದ್ಯಾಭ್ಯಾಸ ಕಡೆಯೂ ಗಮನಹರಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು. ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಮಾತನಾಡಿ ಪೊಲೀಸರ ಕರ್ತವ್ಯದಲ್ಲಿ ಶಿಸ್ತು, ನಿಷ್ಠೆ ಮತ್ತು ಪ್ರಾಮಾಣಿಕತೆ ಅತೀ ಮುಖ್ಯವಾಗಿದೆ. ಜೊತೆಗೆ ಕಾರ್ಯದಕ್ಷತೆ ಪ್ರತಿಯೊಬ್ಬ ಪೊಲೀಸರಲ್ಲಿಯೂ ಇರಬೇಕು. ಹಾಗಾದಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯ ಎಲ್ಲಾ ಹಂತದ ಪೊಲೀಸರು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುವಂತದದ್ದು. ಪೊಲೀಸರು ಪ್ರತೀ ನಿತ್ಯ ಒಂದಲ್ಲ ಒಂದು ರೀತಿ ಸವಾಲು ಮತ್ತು ಕಠಿಣ ಪರಿಸ್ಥಿತಿಯಲ್ಲಿಯೂ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸುವಂತೆ ಮಾಡುತ್ತಾರೆ. ಇದು ಶ್ಲಾಘನೀಯ ಕಾರ್ಯ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆಯ ಬದುಕು ಅತ್ಯಗತ್ಯ. ಆ ನಿಟ್ಟಿನಲ್ಲಿ ಶಾಂತಿ, ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದರು. ಫೀಲ್ಡ್ ಮಾರ್ಷಲ್ ಕೆ..ಎಂ.ಕಾರ್ಯಪ್ಪ ಟ್ರೋಫಿಗೆ ಕೆ.ಎಸ್.ಸುಧೀಶ್ ಕುಮಾರ್ ಮತ್ತು ವಿಶೇಷ ಘಟಕ ವಿಭಾಗದಲ್ಲಿ ಉತ್ತಮ ಪೊಲೀಸ್ ಟ್ರೋಫಿಗೆ ಮನಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪೊಲೀಸ್ ಧ್ವಜ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಬಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷರಿಗೆ ಮುಖ್ಯಮಂತ್ರಿ ಪದಕ ಬಂದಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮುಖ್ಯ ಅತಿಥಿಗಳಿಗೆ ಗೌರವ ವಂದನೆಯನ್ನು ಜಿಲ್ಲಾ ಪೊಲೀಸ್ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರಾದ(ಆರ್‍ಪಿಐ ಡಿಆರ್) ಚೆನ್ನನಾಯಕ ಅವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಅಧೀಕ್ಷಕರಾದ ಉಮೇಶ್ ಉಪ್ಪಳಿಕೆ ಅವರು ಪಥಸಂಚಲನ ತಂಡಗಳ ಪರಿವೀಕ್ಷಣೆ ಮಾಡಿದರು. ಬಳಿಕ ಪೊಲೀಸ್ 8 ತಂಡಗಳಿಂದ ಪಥಸಂಚಲನ ನಡೆಯಿತು. ಪೊಲೀಸ್ ವಾದ್ಯಗೋಷ್ಠಿ ತಂಡದಿಂದ ರಾಷ್ಟ್ರಗೀತೆ ಜರುಗಿತು. ಬಳಿಕ ಪೊಲೀಸ್ ಧ್ವಜ ವಿತರಿಸಲಾಯಿತು. ಪ್ರೊಭೆಷನರಿ ಐಪಿಎಸ್ ಅಧಿಕಾರಿ ಡಾ.ಬೆನಕ ಪ್ರಸಾದ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ, ಡಿವೈಎಸ್‍ಪಿಗಳಾದ ಪಿ.ಎ.ಸೂರಜ್(ಮಡಿಕೇರಿ), ಮಹೇಶ್ ಕುಮಾರ್(ವಿರಾಜಪೇಟೆ), ಗಂಗಾಧರಪ್ಪ(ಸೋಮವಾರಪೇಟೆ), ಸೈಬರ್ ಅಪರಾಧ ವಿಭಾಗದ ಡಿವೈಎಸ್‍ಪಿ ರವಿ, ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇತರರು ಇದ್ದರು.