




ಕುಶಾಲನಗರ NEWS DESK : ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಸ್ಕೌಟ್ಸ್, ಗೈಡ್ಸ್ ನ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಸೋಮವಾರಪೇಟೆ ಉಪ ವಿಭಾಗದ ಡಿವೈಎಪ್ಸಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಉತ್ತಮ ವ್ಯಕ್ತಿತ್ವ ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಸಮವಸ್ತ್ರಧಾರಿಗಳಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ. ಜೊತೆಗೆ ಜವಾಬ್ದಾರಿ ಕೂಡ ಜಾಸ್ತಿ ಇರುತ್ತದೆ. ಜನರು ಸಮವಸ್ತ್ರಧಾರಿಗಳನ್ನು ಗಮನಿಸುತ್ತಾರೆ. ಆದ್ದರಿಂದ ತಮ್ಮ ನಡವಳಿಕೆ,ರೀತಿ,ನೀತಿ ಜೊತೆಗೆ ಉತ್ತಮ ವರ್ತನೆಯನ್ನು ತೋರಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿಗಳು ಮುಂದೆ ಪೊಲೀಸ್, ಸೈನಿಕರ ಸಮವಸ್ತ್ರ ಧರಿಸುವಂತಾಗಿ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತ ಭಾಗ್ಯ ದೊರೆಯಲಿ ಎಂದು ಶುಭ ಹಾರೈಕೆ. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಕಲಿಕೆಗೆ ಸಹಕಾರಿಯಾಗುತ್ತದೆ.ವಿದ್ಯಾರ್ಥಿಗಳು ಅರೆ ಮನಸ್ಸಿನಿಂದ ಭಾಗವಹಿಸದೆ, ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು. ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ,1907 ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಗೊಂಡಿತು. ಇದು ವಿದ್ಯಾರ್ಥಿಗಳಲ್ಲಿ ಐಕ್ಯತೆ ಹಾಗೂ ಪರಸ್ಪರ ಪ್ರೀತಿ, ಸ್ನೇಹ ಬೆಳೆಸುತ್ತದೆ. ಜತೆಗೆ ಇಂತಹ ಶಿಬಿರಗಳು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದರು. ಉತ್ತಮವಾಗಿ ಬೇಸಿಗೆ ಶಿಬಿರ ನಡೆಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕ ಪ್ರತಿಭೆ, ಕಲೆ ಬೆಳೆಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ.ಉತ್ತಮ ಸಂಸ್ಕಾರ, ಗುರು ಹಿರಿಯರು ಹಾಗೂ ಪೋಷಕರನ್ನು ಗೌರವಿಸಲು ಕಲಿಯಬೇಕು.ಉತ್ತಮ ನಾಯಕತ್ವ ಗುಣ ಬೆಳೆಸುವುದರೊಂದಿಗೆ ಉತ್ತಮ ಜೀವನ ಕೌಶಲ್ಯ ಹಾಗೂ ಸತ್ಪ್ರಜೆಗಳಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ವೇದಿಕೆಯಾಗಿದೆ ಎಂದರು.ಉತ್ತಮ ರೀತಿಯಲ್ಲಿ ಬೇಸಿಗೆ ಶಿಬಿರವನ್ನು ನಿಸರ್ಗದ ಮಡಿಲಲ್ಲಿ ಹಮ್ಮಿಕೊಂಡಿರುವುದು ಮಕ್ಕಳಲ್ಲಿ ಚೈತನ್ಯ ಮೂಡಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ,ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿಗಳಿದ್ದಂತೆ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಈ ಸಂದರ್ಭ ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಜಿಲ್ಲಾ ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು.ರಂಜಿತ್, ಕುಶಾಲನಗರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಅರುಣ್, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ, ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಮುಖ್ಯ ಶಿಕ್ಷಕಿ ಎಚ್.ಕೆ.ವಿಜಯ, ಕಾರ್ಯಾಧ್ಯಕ್ಷ ತಮ್ಮಯ್ಯ, ಖಜಾಂಜಿ ಎನ್.ಎಸ್.ನರೇಶ್, ಜಯರಾಜ್, ಆಚಾರ್ಯ.ಕೆ.ಬಿ.ಗಣೇಶ್,ಇಂದಿರಾ, ಡೈಸಿ, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ನಿತೀಶ್ ಗುಪ್ತ,ಖಜಾಂಜಿ ಕಿರಣ್,ನಿರ್ದೇಶಕ ದಯಾನಂದ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಎಂಟು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ವಯಂ ಸೇವಕರು ಹಾಗೂ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ನ ಸ್ವಯಂ ಸೇವಕರು ಭಾಗವಹಿಸಿದ್ದರು.