


ವಿರಾಜಪೇಟೆ ಏ.4 NEWS DESK : ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್ ಡಿ.ರಾಜಾ ದೊರೈಪಾಂಡಿಯನ್ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ಬೆಂಗಳೂರಿನ ಕೋರಮಂಗಲದ ಪೋಲೀಸ್ ಪೆರೆಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿ ಪೊಲೀಸ್ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಿದರು. ರಾಜ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು ಈ ಬಾರಿ 2022-23ನೇ ಸಾಲಿನ ಅತ್ಯುತ್ತಮ ಸೇವೆಗಾಗಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿ ರಾಜಾ ಅವರಿಗೆ ವಿಶೇಷ ಕರ್ತವ್ಯ ನಿಮಿತ್ತ ಈ ಪ್ರಶಸ್ತಿ ಸಂದಿದೆ. ಉತ್ತಮ ಕರ್ತವ್ಯಕ್ಕಾಗಿ ಹಿರಿಯ ಅಧಿಕಾರಿಗಳಿಂದ ಹಲವು ಬಾರಿ ಪ್ರಶಂಷನೆಗೊಳಗಾಗಿದ್ದು, 2022ನೇ ಸಾಲಿನಲ್ಲಿ ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. ಮದುರೈ ಮೂಲದ ದೊರೈಪಾಂಡಿಯನ್ ಮತ್ತು ಪಂಚವರ್ಣಂ ಅವರ ಮಗ ಡಿ ರಾಜಾ ಅವರು ಟಾಟಾ ಕಾಫಿ ಸಂಸ್ಥೆ ಪಾಲಿಬೆಟ್ಟದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಹುಟ್ಟಿ ಬೆಳೆದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಮ್ಮೆಗುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಿಬೆಟ್ಟದಲ್ಲಿ ಪ್ರೌಡ ಶಿಕ್ಷಣ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದು 2009 ರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ಸಿದ್ದಾಪುರ ಪೊಲೀಸ್ ಠಾಣೆ, ಪೊನ್ನಂಪೇಟೆ ಪೊಲೀಸ್ ಠಾಣೆ, ನಂತರ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ನಕ್ಸಲ್ ನಿಗ್ರಹದಳ ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.