




ಮಡಿಕೇರಿ ಏ.4 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ದಿಢೀರ್ ರಸ್ತೆ ತಡೆ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿನಯ್ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ನ್ಯಾಯಾಲಯದಿಂದ ತಡೆ ದೊರೆತ್ತಿದ್ದರು ಪೊಲೀಸರು ಬೇರೆ ಸೆಕ್ಷನ್ ನಡಿ ಪ್ರಕರಣ ದಾಖಲಿಸಲು ಪ್ರಯತ್ನಿಸಿದ್ದಾರೆ. ಅಶುಚಿತ್ವದಿಂದ ಕೂಡಿದ್ದ ನಾಪೋಕ್ಲು ಸಾರ್ವಜನಿಕ ಶೌಚಾಲಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿನಯ್ ಅವರು ವಿಚಾರ ಹಂಚಿಕೊಂಡಿದ್ದೇ ದೊಡ್ಡ ತಪ್ಪು ಎಂದು ಪ್ರತಿಬಿಂಬಿಸಿ ಎಫ್‍ಐಆರ್ ದಾಖಲಿಸಲಾಗಿದೆ. ಶೌಚಾಲಯವನ್ನು ಶುಚಿಗೊಳಿಸಲು ಕ್ರಮಕೈಗೊಳ್ಳದೆ ಎಫ್‍ಐಆರ್ ದಾಖಲಿಸಿರುವುದು ಖಂಡನೀಯ. ಪೊಲೀಸರು ಕಾಂಗ್ರೆಸ್ ಶಾಸಕರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ವಿಚಾರಕ್ಕೂ ವಿನಯ್ ಗೂ ಯಾವುದೇ ಸಂಬಂಧ ಇರುವುದಿಲ್ಲ. ಇಂದು ಅಮಾಯಕನ ಸಾವಾಗಿದೆ, ವಿನಯ್‍ನ ತಪ್ಪಿಲ್ಲ ಎಂದು ತಿಳಿದಿದ್ದರು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರು ಒತ್ತಡ ಹೇರಿದ ಕಾರಣದಿಂದ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಆರೋಪಿಸಿದರು. ಇಬ್ಬರು ಶಾಸಕರು ಅಧಿಕಾರ ಬಿಟ್ಟು ವಿನಯ್ ಸಾವಿನ ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದು ರವಿ ಕಾಳಪ್ಪ ಒತ್ತಾಯಿಸಿದರು.
::: ರಸ್ತೆ ತಡೆ ::: ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರಬೇಕೆಂದು ಒತ್ತಾಯಿಸಿದರು. ರಸ್ತೆ ತಡೆ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಪೊಲೀಸ್ ಅಧಿಕಾರಿಗಳು ಕೋರಿಕೊಂಡರು ಪಟ್ಟು ಬಿಡದ ಪ್ರತಿಭಟನಾಕಾರರು ಎಸ್‍ಪಿ ಬರಬೇಕೆಂದು ಒತ್ತಾಯಿಸಿದರು. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಿನಯ್ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆ ತನಿಖೆಗೆ ಕೊಡಗು ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು. ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಸುವಿನ್ ಗಣಪತಿ, ಜಗದೀಶ್, ಅರುಣ್ ಶೆಟ್ಟಿ, ನಗರಸಭಾ ಸದಸ್ಯರುಗಳು, ನಗರ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಡಿವೈಎಸ್‍ಪಿ ಪೆಮ್ಮಂಡ ಎ.ಸೂರಜ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಬಿಜೆಪಿ ಮಂದಿ ದಿಢೀರ್ ಆಗಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಪ್ರತಿಭಟನೆ ಮಾಡಿದ ಕಾರಣ ಮೈಲುಗಟ್ಟೆಲೆ ದೂರ ವಾಹನಗಳು ನಿಂತಿದ್ದವು.