

ಮಡಿಕೇರಿ NEWS DESK ಏ.4 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೂ ಮೊದಲು ವಿನಯ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ವಕ್ತಾರನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಕ್ಷಣ ಬಂಧಿಸಬೇಕೆದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅತ್ಯಂತ ಸೌಮ್ಯ ವ್ಯಕ್ತಿತ್ವದ ವಿನಯ್ ಅವರ ಸಾವು ಬೇಸರ ಮೂಡಿಸಿದೆ. ಇವರ ಸಾವಿನ ಹಿಂದಿನ ಬೆಳವಣಿಗೆಗಳು ಖಂಡನೀಯ. ಸಾಮಾಜಿಕ ಜಾಲತಾಣದಲ್ಲಿ ವಿರಾಜಪೇಟೆ ಶಾಸಕರನ್ನು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ವಿನಾಕಾರಣ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್ ಗೆ ನ್ಯಾಯಾಲಯದಿಂದ ತಡೆ ದೊರೆತ ನಂತರವೂ ಮಾನಸಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾವಿಗೂ ಮುನ್ನ ವಿನಯ್ ನೀಡಿರುವ ಹೇಳಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ವಿನಯ್ ಅವರು ಕಾಂಗ್ರೆಸ್ ವಕ್ತಾರನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವರನ್ನು ತಕ್ಷಣ ಬಂಧನಕ್ಕೊಳಪಡಿಸಿ ತನಿಖೆ ನಡೆಸಬೇಕು. ಇವರೊಂದಿಗೆ ಇನ್ನೂ ಕೆಲವರ ಹೆಸರುಗಳನ್ನು ಕೂಡ ವಿನಯ್ ಉಲ್ಲೇಖಿಸಿದ್ದು, ಇವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಆಡಳಿತ ಪಕ್ಷದ ಒತ್ತಡಕ್ಕೆ ಪೊಲೀಸರು ಮಣಿಯಬಾರದು ಎಂದು ಆಗ್ರಹಿಸಿದ್ದಾರೆ. ವಿನಯ್ ಸೇರಿದಂತೆ ಮೂವರ ವಿರುದ್ಧ 107 ಅಡಿ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ನಿರಂತರ ಕಿರುಕುಳದಿಂದ ಬೇಸತ್ತಿದ್ದ ವಿನಯ್ ಆತ್ಮಹತ್ಯೆಗೆ ಶರಣಾಗಿರುವುದು ಇದರಿಂದ ಸ್ಪಷ್ಟವಾಗಿದೆ. ಈ ಪ್ರಕರಣ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಳಿತಕ್ಕೆ ಸಾಕ್ಷಿಯಾಗಿದೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.