





ಕುಶಾಲನಗರ, ಏ.6 NEWS DESK : ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಆರೋಗ್ಯ, ನೈರ್ಮಲ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮನವಿ ಮಾಡಿದರು. ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಾವುಗಳು ನಿಸರ್ಗದ ನಿಯಮಗಳನ್ನು ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದರು. ಪರಿಸರ ಜಾಥಾದ ಮಹತ್ವ ತಿಳಿಸಿದ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ತರಬೇತಿ ಆಯುಕ್ತ ಕೆ.ಯು.ರಂಜಿತ್ ಸ್ಕೌಟ್ಸ್ , ಗೈಡ್ಸ್ ಮತ್ತು ರೇಂಜರ್ಸ್ ಹಾಗೂ ರೋವರ್ಸ್ ನ ಸ್ವಯಂ ಸೇವಕರು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ಇಂತಹ ಪರಿಸರ ಜಾಗೃತಿ ಜಾಥಾಗಳು ಸಹಕಾರಿಯಾಗಿವೆ ಎಂದರು. ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತರೂ ಆದ ಶಿಬಿರದ ಸಂಯೋಜಕಿ ಸಿ.ಎಂ.ಸುಲೋಚನ ಮಾತನಾಡಿ, ಇಂತಹ ಪರಿಸರ ಜಾಥಾಕ್ಕೆ ಎಲ್ಲರೂ ಸಹಕರಿಸುವ ಮೂಲಕ ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಅರುಣ್, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ, ಶಾಲಾ ಮುಖ್ಯ ಶಿಕ್ಷಕಿ ವಿಜಯ, ಗೈಡ್ಸ್ ನ ಶಿಕ್ಷಕಿಯರಾದ ಕೆ.ಟಿ.ಸೌಮ್ಯ, ಶಿಫಾನತ್, ಸ್ಕೌಟ್ಸ್ ಮಾಸ್ಟರ್ ಗಳಾದ ಜಾನ್ ಸನ್,
ಡಿ.ವಿ.ಗಣೇಶ್, ಕೆ.ಬಿ.ಗಣೇಶ್, ಇತರರು ಇದ್ದರು. ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಹೊರಟ ಪರಿಸರ ಜಾಥಾದಲ್ಲಿ ಪರಿಸರ ಸಂರಕ್ಷಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಮುಳ್ಳುಸೋಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯೇ ಸೇವೆ, ಹಸಿರೇ ಉಸಿರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೆಲ- ಜಲ ,ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಘೋಷಣೆಗಳನ್ನು ಕೂಗುವ ಮೂಲಕ ಜನರ ಗಮನ ಸೆಳೆದರು.
ವರ್ಚುವಲ್ ಮೂಲಕ ಪರಿಸರ ಜಾಥಾ ಉದ್ಘಾಟನೆ: ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮುಳ್ಳುಸೋಗೆ ಗ್ರಾಮದಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಜಾಥಾವನ್ನು ಮಡಿಕೇರಿಯಿಂದ. ವರ್ಚುವಲ್ ಮೂಲಕ ಉದ್ಘಾಟಿಸಿ ಜಾಥಾಕ್ಕೆ ಶುಭ ಕೋರಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಸಿ.ರಂಗಧಾಮಪ್ಪ, ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸ್ವಚ್ಛತೆ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.
ವರ್ಚುವಲ್ ಮೂಲಕ ಪರಿಸರ ಜಾಥಾದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಆದ ಟಿ.ಜಿ.ಪ್ರೇಮಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಇಂದು ನಾವು ಅರಣ್ಯ ಮತ್ತು ವನ್ಯಜೀವಿಗಳ ಜತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ ಎಂದರು.