






ಮಡಿಕೇರಿ ಏ.7 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದ ನಂತರದ ಬೆಳವಣಿಗೆಗಳಲ್ಲಿ ಕೊಡಗು ಜಿಲ್ಲೆಯ ಜನಪ್ರಿಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಕೆ.ಆರ್ ಅವರು ಬಡವರ ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುವ ಇಬ್ಬರು ಶಾಸಕರ ಪರವಾಗಿ ಕಾರ್ಮಿಕ ಘಟಕ ನಿಲ್ಲುತ್ತದೆ. ಸಾವಿಗೆ ಶರಣಾದ ವಿನಯ್ ಬಗ್ಗೆ ನಮಗೆ ಅನುಕಂಪವಿದೆ, ಅವರ ಸಾವಿಗೆ ಸಂತಾಪ ಸೂಚಿಸುತ್ತೇವೆ. ಆದರೆ ವಿನಯ್ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕ್ಷುಲ್ಲಕ ರಾಜಕರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಶಾಸಕದ್ವಯರು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಜಿಲ್ಲೆಯ ಸರ್ವ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನಪ್ರಿಯತೆ ಗಳಿಸುತ್ತಿರುವ ಇಬ್ಬರು ಶಾಸಕರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಬಿಜೆಪಿ ಮಂದಿ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿದ್ದಾರೆ. ಈ ನಡೆಯನ್ನು ಹೀಗೆ ಮುಂದುವರೆಸಿದರೆ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ವತಿಯಿಂದ ಬಿಜೆಪಿ ವಿರುದ್ಧ ಜಿಲ್ಲಾ ವ್ಯಾಪಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಪಪ್ರಚಾರ ಮಾಡಿ ಶಾಸಕರುಗಳ ಮನೋಸ್ಥೈರ್ಯವನ್ನು ಕುಗ್ಗಿಸಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಮಂದಿ ಇದ್ದಾರೆ. ಆದರೆ ಇಬ್ಬರು ಶಾಸಕರ ಪರ ಇಡೀ ಕಾಂಗ್ರೆಸ್ ಪಕ್ಷ ಮತ್ತು ಜಿಲ್ಲೆಯ ಜನತೆ ಇದ್ದಾರೆ ಎಂದು ದಿನೇಶ್ ಕೆ.ಆರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಮಿರ್ಶದ್ ಪರವಂಡ, ಶಶಿ, ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ, ಪ್ರಮುಖರಾದ ಸ್ವರ್ಣಲತಾ ಹಾಗೂ ಮಡಿಕೇರಿ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಸುಹೆಲ್ ಉಪಸ್ಥಿತರಿದ್ದರು.