






ಸೋಮವಾರಪೇಟೆ ಏ.7 NEWS DESK : ಕಾಡಂಚಿನಲ್ಲಿರುವ ಯಡವನಾಡು ಗ್ರಾಮದ ಪ್ರಕೃತಿ ಸೌಂದರ್ಯದ ನಡುವೆ ಗ್ರಾಮಸ್ಥರು ಪ್ರತಿಷ್ಠಾಪಿಸಿರುವ ಶಿವ ಬಸವೇಶ್ವರ ದೇವಾಲಯದ ಹನ್ನೆರಡನೇ ವರ್ಷದ ವಿಶೇಷ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಗ್ಗೆ ಗ್ರಾಮದ ಮುಖ್ಯ ಹೆದ್ದಾರಿಯಿಂದ ದೇವಾಲಯದವರೆಗೂ ಗ್ರಾಮದ ಮಹಿಳೆಯರು ಹಾಗೂ ಮಕ್ಕಳು 80 ಕ್ಕೂ ಹೆಚ್ಚಿನ ಪೂರ್ಣಕುಂಭ ಕಲಶಗಳನ್ನು ಹೊತ್ತು ಮೆರವಣಿಗೆ ಮೂಲಕ ದೇವಾಲಯದ ಅವರಣಕ್ಕೆ ತಂದರು. ಈ ಸಂದರ್ಭ ಗ್ರಾಮದ ಪ್ರತಿ ಮನೆ ಮನೆಗಳ ಮುಂಬದಿ ನೀರು ಹಾಕಿ ರಂಗೋಲಿ ಬಿಡಿಸಿ ಪೂರ್ಣಕುಂಭ ಕಲಶಗಳನ್ನು ಸ್ವಾಗತಿಸಿ ಪೂಜಿಸುತ್ತಿದ್ದುದು ಕಂಡು ಬಂತು. ದೇವರ ಸನ್ನಿಧಿಯಲ್ಲಿ ಕಲಶಗಳನ್ನು ಇಟ್ಟ ಬಳಿಕ ದೇವರ ಪೂಜಾ ವಿಧಿಗಳು ಆರಂಭವಾದವು. ನಂತರ ಕಲಾತತ್ಪದಿ ವಾಸ್ತು ಹೋಮ, ಶಿವಬಸವೇಶ್ವರ ದೇವರಿಗೆ ಪಂಚವಿಂಶತಿ ಕಳಸಾಭಿಷೇಕ, ಪಾರ್ವತಿ ದೇವಿಗೆ ನವಕ ಪೂಜೆ, ಗಣಪತಿ ದೇವರಿಗೆ ಕಲಶಾಭಿಷೇಕ, ನಂತರ ಬೆಳಗ್ಗೆ 9:10 ರಿಂದ 9-50 ರ ಒಳಗೆ ವೃಷಭ ಲಗ್ನದಲ್ಲಿ ದೇವರಿಗೆ ಮಹಾಕುಂಭಾಭಿಷೇಕ ನೆರವೇರಿಸಲಾಯಿತು. ಸೋಮವಾರಪೇಟೆಯ ಜಗದೀಶ್ ಉಡುಪ ಹಾಗೂ ಸುಧೀಂದ್ರ ಭಟ್ ತಂಡದಿಂದ ದೇವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಪ್ರಸಾದ ವಿತರಣೆ ಹಾಗೂ ಗ್ರಾಮದ ಸಮಸ್ತ ಸದ್ಭಕ್ತ ಭಕ್ತರಿಗೆ ಅನ್ನ ಸಂತರ್ಪಣೆಯೂ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ, ಉಪಾಧ್ಯಕ್ಷ ಡಿ.ಪಿ.ಕುಟ್ಟಪ್ಪ, ಕಜಾಂಚಿ ಭಾನುಪ್ರಕಾಶ್, ನಿರ್ದೇಶಕರಾದ ಪಿ.ಬಿ.ಸಣ್ಣಯ್ಯ, ಎಂ.ಸಿ.ನವೀನ, ಪಿ.ಜಿ.ಜನಾರ್ಧನ, ಎಲ್.ಬಿ.ದಿನೇಶ್, ಬಿ.ಪಿ.ಭಾನು, ಹೆಚ್.ಸಿ.ಸುಭಾಶ್, ಟಿ.ಜೆ. ತಮ್ಮಯ್ಯ ಇದ್ದರು.