

ಮಡಿಕೇರಿ ಏ.20 NEWS DESK : ಕೊಡಗಿನ ಸಾಹಿತಿ ಟಿ.ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ ಅವರಿಗೆ ದಾವಣಗೆರೆಯಲ್ಲಿ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾಧರ ಕನ್ನಡ ಪ್ರತಿಷ್ಠಾನ, ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸ್ಫೂರ್ತಿ ಪ್ರಕಾಶನ ತೆಲಿಗಿ, ಜ್ಞಾನ ಪ್ರಕಾಶನ ಮತ್ತು ಜ್ಞಾನ ಪ್ರಕಾಶನ ಸಂಸ್ಥೆಯ ವತಿಯಿಂದ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ ಅಂಗವಾಗಿ ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕನ್ನಡ ನುಡಿತೇರು ಕಾರ್ಯಕ್ರಮದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಉಳುವಂಗಡ ಕಾವೇರಿ ಉದಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದಾವಣಗೆರೆಯ ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.
*ಉಳುವಂಗಡ ಕಾವೇರಿ ಉದಯ*
*ಕಿರುಪರಿಚಯ*
ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿಯಾಗಿ 18/5/1969ರಲ್ಲಿ ಜನಿಸಿ ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ 29/11/1990 ರಲ್ಲಿ ಉಳುವಂಗಡ ಯು. ಉದಯ ಅವರನ್ನು ವಿವಾಹವಾದ ಇವರಿಗೆ ಲಿಖಿತ್, ಅಮಿತ್ ಎಂಬ ಇಬ್ಬರು ಪುತ್ರರು ಮತ್ತು ಪೂಜಿತ, ಗಾಯನ ಎಂಬ ಇಬ್ಬರು ಸೊಸೆ ಇರುವರು. ಬಹುಭಾಷಾ ಸಾಹಿತಿ, ಕವಯಿತ್ರಿಯಾಗಿರುವ ಇವರು ಹವ್ಯಾಸಿ ರಂಗ ಕಲಾವಿದೆ ಮತ್ತು ಚಿತ್ರಕಲಾವಿದೆಯು ಆಗಿರುವರು. ಕನ್ನಡ, ಕೊಡವ, ಇಂಗ್ಲಿಷ್, ಹಿಂದಿ ಮತ್ತು ಮಲಯಾಳ ಈ ಐದು ಭಾಷೆಯಲ್ಲಿ, ಕಥೆ, ಕವನ, ಕಾದಂಬರಿ, ಮುಕ್ತಕ, ಜೀವನ ಚರಿತ್ರೆ, ಭಕ್ತಿ ಪ್ರಧಾನ, ಲಲಿತ ಪ್ರಬಂಧ, ನಾಟಕ ಹೀಗೆ ಇವರು ಬರೆದ ಒಟ್ಟು 32 ಕೃತಿಗಳು ಲೋಕಾರ್ಪಣೆಗೊಂಡಿವೆ. ಆರು ಭಾಷೆಯಲ್ಲಿ ಕವನ ವಾಚನ ಮಾಡಿರುವರು.
ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿಯ ಅಧ್ಯಕ್ಷೆ, ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ , ಗುರುಕುಲ ಕಲಾ ಪ್ರತಿಷ್ಠಾನ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ , ಹಾಗು ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆಯ ಉಪಾಧ್ಯಕ್ಷೆ ಆಗಿರುವರು.
ಇವರು ಬರೆದ ಕಾದಂಬರಿ ಕೊಡವ ಸಿನಿಮಾ ಆಗಿದೆ. ಹಾಗು ಸಣ್ಣ ಕಥೆ ಕಿರುಸಿನೆಮ ಆಗಿದೆ. ಇವರು ಬರೆದ ಹಾಡುಗಳನ್ನು ಹಲವಾರು ಗಾಯಕರು ಹಾಡಿರುವರು. ಮಡಿಕೇರಿ ಆಕಾಶವಾಣಿಯ ಸುಪ್ರಭಾತದಲ್ಲಿ ಇವರು ಬರೆದ ಹಾಡು ನಿರಂತರ ಪ್ರಸಾರವಾಗುತ್ತಿದೆ.
ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಕೊಡವ ಮತ್ತು ಕನ್ನಡ ಹೀಗೆ ಎರಡು ಬಾರಿ ಕವನ ವಾಚನ ಮಾಡಿರುವರು. ಹಲವಾರು ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿರುವರು. ವಿವಿಧ ಕಾರ್ಯಕ್ರಮಗಳಲ್ಲಿ ವಿಚಾರ ಮಂಡನೆ ಮಾಡಿರುವರು. ಪೌರಾಣಿಕ , ಸಾಮಾಜಿಕ ನಾಟಕಗಳನ್ನು ಬರೆದು ಮಹಿಳೆಯರಿಗೆ ನಾಟಕ ನಿರ್ದೇಶನ ಮಾಡಿ, ಮುಖ್ಯ ಪಾತ್ರವಹಿಸಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿರುವರು. 2022 ನೆ ಸಾಲಿನ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಗುರುಕುಲ ಕಲಾಪ್ರತಿಷ್ಠಾನದಿಂದ ಗುರುಕುಲ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿ, ನಾಡಿನ ಸಮಾಚಾರ ದಿನಪತ್ರಿಕೆಯಿಂದ ಸಾಹಿತ್ಯ ರತ್ನ ಮತ್ತು ಸಾಹಿತ್ಯ ತಪಸ್ವಿ ಪ್ರಶಸ್ತಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ವಿದ್ಯಾಧರ ಕನ್ನಡ ಪ್ರತಿಷ್ಠಾನದಿಂದ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ, ಇಂಟನ್ರ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಹೀಗೆ ಒಟ್ಟು ಒಂಬತ್ತು ಪ್ರಶಸ್ತಿ ಪಡೆದಿರುವರು. ಸಾಹಿತ್ಯ ಸೇವೆಗಾಗಿ ಇದುವರೆಗೆ ಇವರಿಗೆ 23 ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ.
*ಇವರ ವಿಳಾಸ*
ಉಳುವಂಗಡ ಕಾವೇರಿ ಉದಯ
ಟಿ.ಶೆಟ್ಟಿಗೇರಿ ಗ್ರಾಮ ಅಂಚೆ
ಪೊನ್ನಂಪೇಟೆ ತಾಲೂಕು
ಕೊಡಗು ಜಿಲ್ಲೆ 571249
ಮೊ: 9591366296











