

ಕಣಿವೆ ಏ.20 NEWS DESK : ಉದ್ಘಾಟನೆಗೊಳ್ಳದೇ ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿರುವ ಒಳಚರಂಡಿ ಕಾಮಗಾರಿಯ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಕೊಡಗು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇತ್ತೀಚಿಗಷ್ಟೇ ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೇ ಇರುವ ಬಗ್ಗೆ ಹಾಗೂ ಪೂರ್ಣಗೊಂಡಿರುವ ಪ್ರದೇಶದ ಯುಜಿಡಿ ಜನರ ಬಳಕೆಗೆ ಲಭ್ಯವಾಗುವಂತೆ ಪುರಸಭೆ ಸದಸ್ಯರು ಜಲಮಂಡಳಿ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಪುರಸಭೆ ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳ ಒತ್ತಾಸೆಗೆ ಒಗೊಟ್ಟ ಜಿಲ್ಲಾಧಿಕಾರಿ ವೆಂಕಟರಾಜ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳದಲ್ಲಿದ್ದ ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಅವರಲ್ಲಿ ಯುಜಿಡಿ ಕಾಮಗಾರಿ ಬಗ್ಗೆ ಸಂಪೂರ್ಣ ಸಾಧಕ ಬಾಧಕಗಳ ಮಾಹಿತಿ ಪಡೆದುಕೊಂಡರು. ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ 71 ಕಿಮೀ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು, 6000 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂಬಿತ್ಯಾದಿ ಮಾಹಿತಿಗಳೊಂದಿಗೆ ಜಿಲ್ಲಾಧಿಕಾರಿಗಳ ಜೊತೆ ನಿವೇದಿಸಿದ ಜಲಮಂಡಳಿ ಅಧಿಕಾರಿಗಳು ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಜನಸಾಮಾನ್ಯರ ಬಳಕೆಗೆ ಚಾಲನೆ ನೀಡುವ ಮುನ್ನಾ ಆರಂಭದ ಮೂರು ತಿಂಗಳ ಅವಧಿ ಜಲಮಂಡಳಿಯಿಂದಲೇ ನಿರ್ವಹಿಸಬೇಕಿದೆ. ಹಾಗಾಗಿ ಸ್ಥಳೀಯ ಪುರಸಭೆಗೆ 12.04 ಲಕ್ಷ ರೂಗಳ ನಿರ್ವಹಣಾ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುರಸಭೆ ಆಡಳಿತ ಮಂಡಳಿ ಈ ಬಗ್ಗೆ ನಿರ್ವಹಣಾ ವೆಚ್ಚವನ್ನು ಜಲಮಂಡಳಿಗೆ ಪಾವತಿಸಿದಷ್ಟು ಬೇಗನೆ ಇದನ್ನು ಜನರ ಬಳಕೆಗೆ ಒದಗಿಲಾಗುತ್ತದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪುರಸಭೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಾರ್ವಜನಿಕರಿಗೆ ಅತೀ ಬೇಗನೆ ಬಳಕೆಗೆ ಸಿಗುವಂತಹ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಯೋಜನಾ ನಿರ್ದೇಶಕ ಬಸಪ್ಪ, ಜಲಮಂಡಳಿ ಸಹಾಯಕ ಅಭಿಯಂತರ ಬಿಪಿನ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಕಂದಾಯ ಅಧಿಕಾರಿ ಸಂತೋಷ್ ಇದ್ದರು.











