
ಮಡಿಕೇರಿ NEWS DESK ಮೇ 11 : ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಹದಗೆಟ್ಟಿದ್ದ ತೀರ್ಥಕ್ಷೇತ್ರ ತಲಕಾವೇರಿ-ಭಾಗಮಂಡಲ ಸಂಪರ್ಕಿಸುವ ಮಡಿಕೇರಿ ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳ-ಬೆಟ್ಟಗೇರಿ ಭಾಗದ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಅಪ್ಪಂಗಳ ಜಂಕ್ಷನ್ ನಿಂದ ಬೆಟ್ಟಗೇರಿ ವರೆಗೆ ರಸ್ತೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ರಾಜ್ಯದಿಂದ ಹಾಗೂ ಹೊರ ರಾಜ್ಯದಿಂದ ಬರುವ ಸಾವಿರಾರು ಭಕ್ತರಿಗೆ ಈ ರಸ್ತೆಯು ಅನುಕೂಲವಾಗಲಿದೆ. ಗುತ್ತಿಗೆದಾರರು ವೈಜ್ಞಾನಿಕ ರೂಪದಲ್ಲಿ ರಸ್ತೆಯನ್ನು ನಿರ್ಮಿಸಬೇಕು ಮತ್ತು ಸಾವಿರಾರು ಭಕ್ತರು, ಸಾರ್ವಜನಿಕರು ಸಂಚರಿಸುವ ರಸ್ತೆ ಇದಾಗಿರುವುದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಇಸ್ಮಾಯಿಲ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಚೆಟ್ಟಿಮಾನಿ-ಕುಂದಚೇರಿಗೆ ತೆರಳುವ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೂ ಶಾಸಕರು ಭೂಮಿಪೂಜೆ ನೆರವೇರಿಸಿದರು. ಸುಮಾರು 1.25ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಶ್ರೀ ಕಾವೇರಿ ತಾಯಿ ಕ್ಷೇತ್ರದ ಬಂಡಾರ ಮನೆ ಹಾಗೂ ಶ್ರೀ ಭಗಂಡೇಶ್ವರ ದೇವಾಲಯದ ಅತಿಥಿಗೃಹ ನಿರ್ಮಾಣಕ್ಕೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳಲಿವೆ.









