ಸುಂಟಿಕೊಪ್ಪ, NEWS DESK ಸೆ.15: ವಿವಿಧತೆಯಲ್ಲಿ ಏಕತೆ ಹಾಗೂ ಶಾಂತಿಯ ತೋಟವಾಗಿರುವ ಸುಂಟಿಕೊಪ್ಪದಲ್ಲಿ ಗೌರಿ ಗಣೇಶೋತ್ಸವದ ಸಂಭ್ರಮ ಮನೆಮಾಡಿದ್ದು, ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 62ನೇ ವರ್ಷದ ಸ್ವರ್ಣ ಗೌರಿ ಮತ್ತು ಗಣೇಶೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದ ಕನ್ನಡ ವೃತ್ತದಲ್ಲಿ ನಡೆದ ಸ್ವರ್ಣ ಗೌರಿ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಭಕ್ತಾಧಿಗಳಿಗೆ ಸಿಹಿ ತಿಂಡಿ ಹಾಗೂ ತಂಪುಪಾನೀಯಗಳನ್ನು ವಿತರಿಸಿದರು. ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ, ಒಂದಾಗಿ ಸಹಬಾಳ್ವೆಯಿಂದ ಬಾಳೋಣ ಎಂಬ ಸಂದೇಶವನ್ನು ಈ ಮೂಲಕ ಸಾರಿದರು.
ಇದಕ್ಕೂ ಮುನ್ನ ಸೋಮವಾರ ಶ್ರೀರಾಮ ಮಂದಿರದಲ್ಲಿ ಸ್ವರ್ಣ ಗೌರಿ ಮತ್ತು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲ ತರುವ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀರಾಮ ಮಂದಿರವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳು, ಕೇಸರಿ ತಳಿರು ತೋರಣಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ 8.30ಕ್ಕೆ ರಾಮ ಮಂದಿರದಿಂದ ಹೊರಟ ಮೆರವಣಿಗೆಯು ಪಟ್ಟೆಮನೆ ಗೌರಮ್ಮನ ಬಾವಿಗೆ ತೆರಳಿ ಗಂಗಾಜಲವನ್ನು ತರಲಾಯಿತು. ಬಳಿಕ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿ, ನಾದಸ್ವರ ಹಾಗೂ ಭಜನಾ ಗೀತೆಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ವಾಹನದ ಮೂಲಕ ಮೆರವಣಿಗೆ ನಡೆಸಲಾಯಿತು. ನಂತರ ಬೆಳಿಗ್ಗೆ 11.45ಕ್ಕೆ ಶ್ರೀರಾಮ ಮಂದಿರದಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿತು.
ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಹಾ.ಮ. ಗಣೇಶ್ ಶರ್ಮಾ ಮತ್ತು ಮಂಜುನಾಥ್ ಭಟ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಶ್ರೀರಾಮ ಸೇವಾ ಸಮಿತಿ ಟ್ರಸ್ಟಿ ಕಾರ್ಯದರ್ಶಿ ಆಶೋಕ್ ಶೇಟ್, ಟ್ರಸ್ಟಿ ಎ. ಲೋಕೇಶ್ ಕುಮಾರ್, ಕೆ.ಪಿ. ಜಗನ್ನಾಥ್, ಡಿ. ನರಸಿಂಹ, ಶಾಂತರಾಮ ಕಾಮತ್, ಬಿ.ಎಂ. ಸುರೇಶ್, ಧನುಕಾವೇರಪ್ಪ, ಎಂ.ಎಸ್. ಸುನಿಲ್, ಸುರೇಶ್ ಗೋಪಿ, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಸದಾಶಿವ, ಪಟ್ಟೆಮನೆ ಅನಿಲ್ ಕುಮಾರ್, ಬಿ.ಕೆ. ಮೋಹನ್, ಬಿ.ಎಸ್. ಸದಾಶಿವರೈ, ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್. ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ. ಪ್ರಶಾಂತ್, ಸಿ.ಸಿ. ಸುನಿಲ್ ಕುಮಾರ್, ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ನಿಖಿಲ್, ಖಜಾಂಜಿ ಪದ್ಮನಾಭ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್, ಮುಸ್ಲಿಂ ಜಮಾತ್ ಕಾರ್ಯದರ್ಶಿ ಅಬ್ದುಲ್ ಸಲಾಂ, ಎ.ಎಂ. ಶರೀಫ್, ಹಮೀದ್, ಶಂಷುದ್ದೀನ್, ಇಬ್ರಾಹಿಂ, ಆಶ್ರಫ್, ನಾಜರ್, ಇಲ್ಯಾಸ್, ಹಸೈನಾರ್ ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದು, ಸಿಹಿ ತಿಂಡಿ ಮತ್ತು ತಂಪುಪಾನೀಯಗಳನ್ನು ವಿತರಿಸಿದರು.
ಗೌರಿ ಮೆರವಣಿಗೆಯ ಸಂದರ್ಭದಲ್ಲಿ ಸುಂಟಿಕೊಪ್ಪ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸಿಮೀನು, ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳನ್ನು ಮುಚ್ಚುವ ಮೂಲಕ ವ್ಯಾಪಾರಸ್ಥರು ಕೂಡ ಸೌಹಾರ್ದತೆ ಮೆರೆದರು.







