ಮಡಿಕೇರಿ NEWS DESK ಮೇ 18 : ಲೋಕಕಲ್ಯಾಣಾರ್ಥವಾಗಿ ಶ್ರೀಶ್ರೀ ಕಾಂತಾನAದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ 11 ದಿನಗಳ ಕೋಟ್ಯಧಿಕ ಶ್ರೀರುದ್ರ ಜಪಯಜ್ಞ ಯಶಸ್ವಿಯಾಗಿ ಮುಂದುವರೆದಿದ್ದು, ಇದು ಕಾವೇರಿ ನಾಡಿನ ಸೌಭಾಗ್ಯ ಎಂದು ಜಪಯಜ್ಞ ಪ್ರತಿನಿಧಿ ಎಸಳೂರು ಉದಯಕುಮಾರ್ ತಿಳಿಸಿದ್ದಾರೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ರುದ್ರ ಜಪ ಕೈಂಕರ್ಯದ ನಂತರ ಮಾತನಾಡಿದ ಅವರು ಈ ಜಪಯಜ್ಞದಲ್ಲಿ ನಾಡಿನ ವಿವಿಧೆಡೆಯ 30ಕ್ಕೂ ಅಧಿಕ ಋತ್ವಿಜರು ಪಾಲ್ಗೊಂಡು ಪ್ರತಿದಿನವೂ ತ್ರಿಕಾಲದಲ್ಲಿ ಜಪ ಮಾಡಿರುವುದರಿಂದ ನಾಡಿಗೆ ಕಲ್ಯಾಣವಾಗಲಿದೆ ಎಂದರು. ಮೇ 20 ರಂದು ಮಡಿಕೇರಿಯ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ನಡೆಯಲಿದೆ. 21ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಚಂಡಿಕಾ ಹೋಮ ಹಾಗೂ ಜಪಯಜ್ಞದ ಸಮಾರೋಪ ನಡೆಯಲಿದೆ. ಇಲ್ಲಿಗೆ ಅವಧೂತ ಶ್ರೀ ಕಾಂತಾನAದ ಸರಸ್ವತಿ ಮಹಾರಾಜರು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು. ಶ್ರೀಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇ.ಬ.ಹರೀಶ ಭಟ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಇಷ್ಟೊಂದು ಜನ ಋತ್ವಿಜರಿಂದ ರುದ್ರ ಜಪ ನಡೆದಿರಲಿಲ್ಲ. ಈ ಜಪಯಜ್ಞವು ಅಭೂತಪೂರ್ವ ಅನುಭವವನ್ನು ತಂದಿದೆ ಎಂದರು. ಕೊಡಗು ಅತಿರುದ್ರ ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ಹಾಗೂ ಉಪಾಧ್ಯಕ್ಷ ಸಂಪತ್ ಕುಮಾರ್ ಸರಳಾಯ ಉಪಸ್ಥಿತರಿದ್ದರು.










