ಮಡಿಕೇರಿ ಮೇ 21 NEWS DESK : ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ದೇವರಪುರ ಗ್ರಾಮದಲ್ಲಿ ನಡೆದಿದೆ. ತೋಟದ ಕಾರ್ಮಿಕ ಅಣ್ಣಯ್ಯ (41) ಎಂಬುವವರೇ ಮೃತ ದುರ್ದೈವಿ. ತೋಟಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದಾಗ ಎದುರಾದ ಕಾಡಾನೆ ದಾಳಿ ಮಾಡಿದೆ. ಕಿರಿದಾದ ರಸ್ತೆಯಲ್ಲಿ ಅಣ್ಣಯ್ಯ ಓಡಲು ಯತ್ನಿಸಿದರಾದರೂ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ದೇವರಪುರ ಗ್ರಾಮದ ಅಯ್ಯಪ್ಪ ದೇವಾಲಯದಲ್ಲಿ ವಾರ್ಷಿಕ ಬೇಡು ಹಬ್ಬ ಆಚರಣೆಗೆ ತಯಾರಿ ನಡೆಸುತ್ತಿರುವಾಗಲೇ ಕಾಡಾನೆ ದಾಳಿಯಾಗಿದೆ. ಊರಿನಲ್ಲಿ ಹಬ್ಬದ ಸಂಭ್ರಮದ ಬದಲು ಅಣ್ಣಯ್ಯ ಅವರ ಸಾವಿನ ಶೋಕ ಮಡುಗಟ್ಟಿದೆ. ಸ್ವಲ್ಪ ಹೊತ್ತಿನವರೆಗೆ ಮೃತದೇಹವನ್ನು ತೆಗೆಯಲು ಕೂಡ ಕಾಡಾನೆ ಬಿಡಲಿಲ್ಲ ಎಂದು ತಿಳಿದು ಬಂದಿದೆ. ಗ್ರಾಮಸ್ಥರ ಸಹಕಾರದಿಂದ ಅರಣ್ಯ ಸಿಬ್ಬಂದಿಗಳು ಕಾಡಾನೆಯನ್ನು ಕಾಡಿಗಟ್ಟಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದರು.












