
ಮಡಿಕೇರಿ ಮೇ 24 NEWS DESK : ಉತ್ತಮ ಭವಿಷ್ಯಕ್ಕಾಗಿ ಪರಿಸರ ಕಾಳಜಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹುಟ್ಟಬೇಕು. ಕಾನೂನಿನ ಹೊರತಾಗಿಯೂ ವೈಯಕ್ತಿಕವಾಗಿ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಮಾಲಿನ್ಯಕಾರಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ವಸ್ತುಗಳ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಸೋಮವಾರಪೇಟೆ ಬಿ.ಟಿ.ಸಿ.ಜಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಕೊಡಗು ವಿಶ್ವವಿದ್ಯಾಲಯದ ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ವಾರ್ಷಿಕ ವಿಶೇಷ ಶಿಬಿರದಲ್ಲಿ “ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಕುರಿತ ಜಾಗೃತಿ ಆಂದೋಲನದಲ್ಲಿ ಪ್ಲಾಸ್ಟಿಕ್ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಪರಿಸರಕ್ಕೆ ತೀವ್ರ ಹಾನಿಯುಂಟು ಮಾಡುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಅನಗತ್ಯ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟಲು ಆದ್ಯತೆ ನೀಡಬೇಕಿದೆ ಎಂದರು. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ನಮಗೆಲ್ಲರಿಗೂ ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವರ್ಷ, ಲಕ್ಷಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಸಾಗರಗಳ ಮೇಲೆ ಪರಿಣಾಮ ಬೀರುತ್ತದೆ, ನದಿಗಳು ಮತ್ತು ಸುಂದರವಾದ ಭೂದೃಶ್ಯಗಳನ್ನು ಕಲುಷಿತಗೊಳಿಸುತ್ತದೆ. ಈ ಕಸದ ರಾಶಿಯು ನಮ್ಮ ಪ್ರಕೃತಿ ಮತ್ತು ನಮಗೂ ನೋವುಂಟು ಮಾಡುತ್ತದೆ. ಈ ದೊಡ್ಡ ಸಮಸ್ಯೆಯನ್ನು ಸರಿಪಡಿಸಲು, ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಬಟ್ಟೆ, ಕಾಗದ, ಸೆಣಬಿನಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಪರಿಸರದಲ್ಲಿ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಪ್ರೇಮಕುಮಾರ್ ಮನವಿ ಮಾಡಿದರು. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಭವಿಷ್ಯದ ದೃಷ್ಟಿಯಿಂದ ನಾವು ಉತ್ತಮ ಪರಿಸರ ಹಾಗೂ ಅರಣ್ಯ ಸಂರಕ್ಷಣೆಗಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮನ್ನು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಸಮಗ್ರತೆ ಹಾಗೂ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಸಂಯೋಜನಾಧಿಕಾರಿ ಎಂ.ಎಸ್.ಶಿವಮೂರ್ತಿ, ಎನ್‍ಎಸ್‍ಎಸ್ ಶಿಬಿರದಲ್ಲಿ ಕೈಗೊಂಡಿರುವ ಶ್ರಮದಾನ ಹಾಗೂ ಸೇವಾ ಕಾರ್ಯಕ್ರಮಗಳ ಕುರಿತು ವಿವರಿಸಿದರು. ವಿಶ್ವವಿದ್ಯಾಲಯಯದ ಕನ್ನಡ ವಿಭಾಗದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹ್ಮದ್, ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಯೋಗೇಶ್ ಮಾತನಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೆಚ್.ಹುಚ್ಚೇಗೌಡ, ಸೋಮವಾರಪೇಟೆ ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್.ವಸಂತ್ ಸೇರಿದಂತೆ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಎನ್‍ಎಸ್‍ಎಸ್ ಸ್ವಯಂ ಸೇವಕರು ಇದ್ದರು.









