
ಮಡಿಕೇರಿ ಜು.2 NEWS DESK : ದಕ್ಷಿಣ ಕೊಡಗಿನ ಇತಿಹಾಸ ಪ್ರಸಿದ್ಧ ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಪುನರ್ ರಚನೆಗೊಂಡ ನೂತನ ಗರ್ಭಗುಡಿಯಲ್ಲಿ ದೇವರ ಬಿಂಬ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಊರ ಕೂಡುಕಟ್ಟಿನ ಯಜಮಾನತ್ವದಲ್ಲಿ ಜು.6 ರಿಂದ 9 ರವರೆಗೆ ನಡೆಯಲಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮೃತ್ಯುಂಜಯ ದೇವಾಲಯ ಸಮಿತಿಯ ಅಧ್ಯಕ್ಷ ಚೋನಿರ ಸುಬ್ರಮಣಿ, ನಾಡ್ ತಕ್ಕ ಕಾಯಪಂಡ ಕೆ.ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಕುರಿತು ಮಾಹಿತಿ ನೀಡಿದರು. ಜು.6 ರಂದು ಸಂಜೆ 6 ಗಂಟೆಯಿಂದ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಪುಣ್ಯಾಹ, ಪ್ರಸಾದ ಶುದ್ಧಿ, ವಾಸ್ತು ರಕ್ಕೋಘ್ನ ಹೋಮ, ವಾಸ್ತು ಬಲಿ ನಡೆಯಲಿದೆ. ಜು.7 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಾಭಿಷೇಕ, 12:30ಕ್ಕೆ ಮಧ್ಯಾಹ್ನ ಪೂಜೆ, ಸಂಜೆ 7 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ಮಂಟಪ ಸಂಸ್ಕಾರ ಜರುಗಲಿದೆ. ಜು.8 ರಂದು ಬೆಳಗ್ಗೆಯಿಂದ ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಹೋಮ, ಶಯ್ಯಾ ಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಧ್ಯಾನ ಸಂಕೋಚ, ಜೀವ ಕಲಶ ಪೂಜೆ, ಜೀವೋಧ್ವಾಸನೆ, ಜೀವಕಲಶ ಶಯ್ಯಾಗಮನ, ಶಯನ, ಸಂಜೆ 7 ಗಂಟೆಯಿಂದ ಧ್ಯಾನಾಧಿವಾಸ, ಬ್ರಹ್ಮಕಲಶಪೂಜೆ, ಅಧಿವಾಸ ಹೋಮ ಪರಿಕಲಸ ಪೂಜೆ, ಪ್ರಸಾದ ಅಧಿವಾಸ, ಪೀಠಾಧಿವಾಸ, ಕಲಶಾಧಿವಾಸ ನಡೆಯಲಿದೆ. ಜು.9 ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ತತ್ವಹೋಮ, ತತ್ವ ಕಲಶ ಪೂಜೆ, 9:09 ರಿಂದ 10:22ರ ಸಿಂಹಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮೃತ್ಯುಂಜಯ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವಕಲಶಾಷೇಕ, ಶಿಖರ ಪ್ರತಿಷ್ಠೆ ಮುಂದುವರಿದು ತತ್ವ ಕಲಶಾಭಿಷೇಕವಾಗಲಿದೆ. ಮಧ್ಯಾಹ್ನ 1:30ಕ್ಕೆ ಮಹಾಪೂಜೆ, ಮಂತ್ರಾಕ್ಷತೆಯ ನಂತರ ಅನ್ನಸಂತರ್ಪಣೆಯಾಗಲಿದೆ ಎಂದು ಮಾಹಿತಿ ನೀಡಿದರು. *365 ದಿನವೂ ಮೃತ್ಯುಂಜಯ ಹೋಮ* ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನ ಐತಿಹಾಸಿಕವಾಗಿದ್ದು, ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ. ದೇವಸ್ಥಾನದಲ್ಲಿ ವರ್ಷದ 365 ದಿನವೂ ಮೃತ್ಯುಂಜಯ ಹೋಮ, ಮಹಾ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿದೆ. ಸ್ಥಳೀಯ ಗ್ರಾಮ, ನಾಡು ಸೇರಿದಂತೆ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಭಕ್ತರಿಗೆ ಪ್ರತಿದಿನ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ. ಗ್ರಾಮಸ್ಥರ ಉಸ್ತುವಾರಿ, ವಾರ್ಷಿಕ ತೆರಿಗೆ ಇತ್ಯಾದಿ ವ್ಯವಸ್ಥೆಯೊಂದಿಗೆ ದೇವಾಲಯವನ್ನು ನಿರ್ವಹಿಸಿಕೊಂಡ ಬರಲಾಗುತ್ತಿದೆ. ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಶ್ರೀ ಮಹಾವಿಷ್ಣುವಿನ ಗುಡಿಯೂ ಇದ್ದು, ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಸೇವೆ ನಡೆಯುತ್ತದೆ ಎಂದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾ.22 ರಿಂದ ಪ್ರಾರಂಭಿಸಲಾಗಿತ್ತು. ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಧಿ ವಿಧಾನ ನಡೆಸಲಾಗಿದೆ. ಈ ಅವಧಿಯಲ್ಲಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳನ್ನು ನಿಲ್ಲಿಸದೆ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತಿತ್ತು. ಇದೀಗ ಅಂದಾಜು ರೂ.1.20 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರಮುಖವಾಗಿ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಕಾರ್ಯಕ್ಕೆ ಊರು, ನಾಡು ಸೇರಿದಂತೆ ಎಲ್ಲಾ ಭಾಗದ ಭಕ್ತರ ಸಹಕಾರ ಪಡೆಯಲಾಗಿದೆ ಎಂದು ಕಾಯಪಂಡ ಕೆ.ಅಯ್ಯಪ್ಪ ವಿವರಿಸಿದರು. ಪೂಜೆಗೆ ಆಗಮಿಸುವವರು ಪ್ರತಿದಿನ ಬೆಳಿಗ್ಗೆ 11.30ರ ಒಳಗೆ ದೇವಾಲಯ ತಲುಪಬೇಕು. ನಂತರ ಬಂದವರಿಗೆ ಅವಕಾಶ ನೀಡಲು ಕಷ್ಟಸಾಧ್ಯವಾಗುತ್ತದೆ. ಭಕ್ತರು ದೇವಾಲಯಕ್ಕೆ ಒಪ್ಪಿಗೆಯಾಗುವಂತಹ ರೀತಿಯ ಉಡುಗೆ ಧರಿಸಿ ಆಗಮಿಸಬೇಕು. ದೇವಾಲಯದ ಕಟ್ಟುಪಾಡುಗಳಿಗೆ ಅನುಗುಣವಾಗಿ ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದೇವತಕ್ಕ ಅಣ್ಣಿರ ದಾದಾ ಗಣಪತಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್ ಹಾಗೂ ಪ್ರಮುಖರಾದ ಕಾಯಪಂಡ ಶಶಿ ಸೋಮಯ್ಯ ಉಪಸ್ಥಿತರಿದ್ದರು.









