
ಮಡಿಕೇರಿ NEWS DESK ಮೇ 25 : ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಗಾಳಿ ರಭಸವಾಗಿ ಬೀಸಲಿದ್ದು, ಧಾರಾಕಾರ ಮಳೆಯಾಗಲಿದೆ. ಸಾರ್ವಜನಿಕರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವಮಧ್ಯ ಮತ್ತು ದಕ್ಷಿಣ ಅರಬ್ಬಿ ಸಮುದ್ರ, ಪಕ್ಕದ ಈಶಾನ್ಯ ಅರಬ್ಬಿ ಸಮುದ್ರ, ಲಕ್ಷದ್ವೀಪ, ಕೇರಳ, ಕರ್ನಾಟಕ, ಕೊಂಕಣ-ಗೋವಾ ಹಾಗೂ ಗುಜರಾತ್ ಕರಾವಳಿಗಳಲ್ಲಿ ಮೇ 25 ರಂದು ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಭಾರೀ ಮಳೆಯಾಗಲಿದೆ. ಮೇ 26-27ರ ಅವಧಿಯಲ್ಲಿ ಅದೇ ಪ್ರದೇಶದಲ್ಲಿ ಗಾಳಿಯು 40-50 ಕಿ.ಮೀ ಗೆ ಕಡಿಮೆಯಾಗಲಿದೆ. ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಮೇ 25 ರಿಂದ 27 ರವರೆಗೆ ಸಣ್ಣ ಹಡಗುಗಳು ಮತ್ತು ಹಡಗುಗಳ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಮತ್ತು ಮನರಂಜನಾ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸೂಚಿಸಿದೆ.








