ಮಡಿಕೇರಿ NEWS DESK ಜೂ.6 : ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಾಡಿ ಸಮುದಾಯ ಭವನ ಬಳಿಯ ತೋಟದಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆಯಾಗಿದೆ. ಜನಿಸಿದ ಕೆಲವೇ ಗಂಟೆಗಳ ಅವಧಿಯ ಹೆಣ್ಣು ಶಿಶುವನ್ನು ತೋಟದಲ್ಲಿ ಬಿಸಾಡಿ ಹೋಗಿದ್ದು, ನಾಯಿಗಳು ಎಳೆದಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾ.ಪಂ ಸದಸ್ಯ ಆರ್.ಕೆ.ಚಂದ್ರು ಅವರು ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ತಾಲೂಕು ವೈದ್ಯಾಧಿಕಾರಿ ಇಂದೂಧರ್, ಕುಶಾಲನಗರ ವೃತ ನಿರೀಕ್ಷಕ ದಿನೇಶ್ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ನಡೆಸಿದರು. ನಂತರ ಕಳೇಬರವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂಕ್ತ ತನಿಖೆ ನಡೆಸಿ ಶಿಶುವನ್ನು ಬಿಸಾಡಿ ಹೋದವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆರ್.ಕೆ.ಚಂದ್ರ ಒತ್ತಾಯಿಸಿದರು.










